ನವದೆಹಲಿ: ಸಂಸತ್ ಭವನದಲ್ಲಿ ಭದ್ರತಾ ಲೋಪ ಹಾಗೂ ಲೋಕಸಭಾ ಕಲಾಪದವೇಳೆ ದುಷ್ಕರ್ಮಿಗಳಾದ ಸಾಗರ್ ಶರ್ಮಾ, ಮನೋರಂಜನ್ ಎಂಬುವವರು ನುಗ್ಗಿ ಕಲರ್ ಸ್ಪ್ರೇ ಮಾಡಿ ಆತಂಕಸೃಷ್ಟಿಸಿದ ಪ್ರಕರಣ ಸಂಬಂಧ ಸಂಸದ ಪ್ರತಾಪ್ ಸಿಂಹ ವಿವರಣೆ ನೀಡಿದ್ದಾರೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಪಡೆದುಕೊಂಡು ಬಂದಿದ್ದ ಈ ಇಬ್ಬರು ದುಷ್ಕರ್ಮಿಗಳು ಲೋಕಸಭಾ ಕಲಾದವೇಳೆ ಗ್ಯಾಲರಿಯಿಂದ ಜಿಗಿದು ದಾಳಿ ನಡೆಸಿದ್ದರು. ದುಷ್ಕರ್ಮಿಗಳಿಗೆ ಪ್ರತಾಪ್ ಸಿಂಹ ಪಾಸ್ ಸಿಕ್ಕಿದ್ದು ಹೇಗೆ? ಅದರಲ್ಲಿಯೂ ಉತ್ತರ ಪ್ರದೇಶದ ಲಖನೌ ಮೂಲದ ಸಾಗರ್ ಶರ್ಮಾಗೆ ಮೈಸೂರು ಸಂಸದರು ಪಾಸ್ ಕೊಡಲು ಕಾರಣವೇನು? ಎಂಬ ಬಗ್ಗೆ ಸ್ವತಃ ಪ್ರತಾಪ್ ಸಿಂಹ ಲೋಕಸಭಾ ಸ್ಪೀಕರ್ ಗೆ ವಿವರಿಸಿದ್ದಾರೆ.
ಘಟನೆ ಬೆನ್ನಲ್ಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವರನ್ನು ಭೇಟಿಯಾದ ಸಂಸದ ಪ್ರತಾಪ್ ಸಿಂಹ, ಸಾಗರ್ ಶರ್ಮಾಗೆ ಹೇಗೆ ತಮ್ಮ ಕಡೆಯಿಂದ ಪಾಸ್ ನೀಡಲಾಗಿದೆ ಎಂಬುದನ್ನು ತಿಳಿಸಿದ್ದಾರೆ.
ಸಾಗರ್ ಶರ್ಮಾ ಲಖನೌ ಮೂಲದವರಾಗಿದ್ದರೂ ಕೂಡ ಅವರ ತಂದೆ ಮೈಸೂರಿನ ತಮ್ಮದೇ ಕ್ಷೇತ್ರದಲ್ಲಿದ್ದಾರೆ. ಹೊಸ ಸಂಸತ್ ಭವನಕ್ಕೆ ಭೇಟಿ ನೀಡಲು ಪಾಸ್ ಗೆ ಮನವಿ ಮಾಡಿದ್ದರು. ಸಂಸತ್ ಗೆ ಭೇಟಿ ನೀಡಲು ಪಾಸ್ ಗಾಗಿ ತಮ್ಮ ಆಪ್ತಸಹಾಯಕ ಹಾಗೂ ಅವರ ಕಚೇರಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಹಾಗಾಗಿ ಪಾಸ್ ನೀಡಲಾಗಿತ್ತು. ಇದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲ ಎಂದಿದ್ದಾರೆ. ಸಾಗರ್ ಶರ್ಮಾನ ತಮ್ಮ ತಂದೆ ಶಂಕರ್ ಶರ್ಮಾ ಮೂಲಕ ಪಾಸ್ ಪಡೆದು ಸಾಗರ್ ಗೆ ನೀಡಿರಬಹುದು ಎಂದು ತಿಳಿದುಬಂದಿದೆ.
ಶಂಕರ್ ಶರ್ಮಾ ಮೂಲತಃ ಲಖನೌದವರಾದರೂ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ಸಂಸತ್ ನಲ್ಲಿ ಭದ್ರತಾ ಲೋಪ ಪ್ರಕರಣ ಆತಂಕಕಾರಿ ಬೆಳವಣಿಗೆಯಾಗಿದ್ದು, ದುಷ್ಕರ್ಮಿಗಳಿಗೆ ಪಾಸ್ ನೀಡಿದ ಪ್ರಕರಣ ಸಂಬಂಧ ಸಂಸದ ಪ್ರತಾಪ್ ಸಿಂಹ ಅವರನ್ನು ತನಿಖೆ ನಡೆಸುವಂತೆ ವಿಪಕ್ಷಗಳು ಒತ್ತಾಯಿಸಿವೆ.