ನವದೆಹಲಿ: ಸಂಸತ್ ನಲ್ಲಿ ಭಾರಿ ಭದ್ರತಾ ಲೋಪ ಪ್ರಕರಣ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲ-ಕೋಲಾಹಲ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಲೋಕಸಭೆ ಕಲಾಪ ಇಂದು ಆರಂಭವಾದಾಗಿನಿಂದಲೂ ವಿಪಕ್ಷ ಸಂಸದರು ನಿನ್ನೆ ನಡೆದ ಸಂಸತ್ ಭದ್ರತಾ ಲೋಪ ಪ್ರಕರಣವನ್ನು ಪ್ರಸ್ತಾಪಿಸಿ ಗದ್ದಲವೆಬ್ಬಿಸಿದರು. ಸದನದ ಬಾವಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸಂಸದ ಪ್ರತಾಪ್ ಸಿಂಹ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಲೋಕಸಭೆಯ 14 ಸಂಸದರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದೇ ವೇಳೆ ರಾಜ್ಯಸಭೆಯಲ್ಲಿಯೂ ಸಂಸತ್ ಭದ್ರತಾ ಲೋಪ ಪ್ರಕರಣ ಪ್ರತಿಧ್ವನಿಸಿದ್ದು, ವಿಪಕ್ಷ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯಸಭೆಯ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯ ಬಾವಿಗಿಳಿದು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಸದಸ್ಯ ಡೆರೆಕ್ ಒಬ್ರಿಯಾನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಸಂಸತ್ ಭದ್ರತಾ ಲೋಪ ಪ್ರಕರಣ ಹಿನ್ನೆಲೆಯಲ್ಲಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿ ಗದ್ದಲ-ಕೋಲಾಹಲ ನಡೆಸಿದ ಹಿನ್ನೆಲೆಯಲ್ಲಿ ಈವರೆಗೆ ಲೋಕಸಭೆಯ 14 ಹಾಗೂ ರಾಜ್ಯಸಭೆಯ ಓರ್ವ ಸದಸ್ಯ ಸೇರಿ ಒಟ್ಟು 15 ಸಂಸದರನ್ನು ಸಂಸತ್ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಕಲಾಪವನ್ನು ನಾಳೆಗೆ ಮುಂದುಡಲಾಗಿದೆ.
ಲೋಕಸಭೆಯ ಸದಸ್ಯರಾದ ಜ್ಯೋತಿಮಣಿ, ಹೈಬಿ ಈಡನ್, ಡೀನ್ ಕುರಿಯಾಕೋಸ್, ಪ್ರತಾಪನ್, ರಮ್ಯಾ ಹರಿದಾಸ್, ಕನಿಮೊಳಿ, ಮಾಣಿಕ್ಯಂ ಠಾಕೂರ್, ಬೆನ್ನಿ ಬೆಹನನ್, ವಿ.ಕೆ.ಶ್ರೀಕಂದನ್, ಮೊಹಮ್ಮದ್ ಜಾವೇದ್, ಪಿ.ಆರ್.ನಟರಾಜ್, ಕೆ.ಸುಬ್ರಹ್ಮಣ್ಯಂ, ಎಸ್.ಆರ್.ಪಾರ್ಥಿಬನ್, ವೆಂಕಟೆಶನ್ ಹಾಗೂ ರಾಜ್ಯಸಭೆ ಸದಸ್ಯ ಡೆರೆಕ್ ಓಬ್ರಿಯಾನ್ ಸೇರಿದಂತೆ 15 ಸಂಸದರು ಅಮಾನತುಗೊಂಡವರು.