ನವದೆಹಲಿ: ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಅಭ್ಯರ್ಥಿಗಳಿಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ಕುಮಾರ್, ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳು ಗೌರವಯುತವಾಗಿ ನಡೆದುಕೊಳ್ಳಬೇಕು. ದ್ವೇಷ ಭಾಷಣ, ಶತ್ರುಗಳ ರೀತಿ ವರ್ತಿಸುವಂತಿಲ್ಲ. ಚುನಾವಣೆಯಿಂದ ಶತ್ರುಗಳು ಸ್ನೇಹಿತರಾಗಬಹುದು. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ ಎಂದಿದ್ದಾರೆ.
ವಿಭಜಿಸಲು ಪ್ರೇರೇಪಿಸುವ ರಾಜಕೀಯ ಭಾಷಣ ಮಾಡುವಂತಿಲ್ಲ. ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಲಾಗಿದೆ. ವಿಷಯಾಧಾರಿತ ಭಾಷಣ ಮಾಡಬೇಕು. ದ್ವೇಷ ಭಾಷಣ, ಯಾವುದೇ ಜಾತಿ, ಧರ್ಮ, ಧಾರ್ಮಿಕ ವಿಷಯಗಳ ಮೂಲಕ ಮತಯಾಚನೆ ಮಾಡುವಂತಿಲ್ಲ. ಖಾಸಗಿ ಜೀವನದ ಯಾವುದೇ ಅಂಶಗಳನ್ನು ಟೀಕಿಸುವಂತಿಲ್ಲ.
ಪರಿಶೀಲಿಸದ ಹಾಗೂ ಯಾವುದೇ ತಪ್ಪುದಾರಿಗೆ ಎಳೆಯುವಂತಹ ಜಾಹೀರಾತುಗಳನ್ನು ಪ್ರಕಟಿಸಬಾರದು. ಪಕ್ಷದ ಜಾಹೀರಾತುಗಳನ್ನು ಸುದ್ದಿಯಾಗಿ ನೀಡುವಂತಿಲ್ಲ. ಪ್ರತಿಸ್ಪರ್ಧಿಗಳನ್ನು ನಿಂದಿಸುವ ಅವಮಾನಿಸುವ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳ ಮೇಲೆ ನಿರ್ಬಂಧ ಹೇರಲಾಗುವುದು. ಸ್ಟಾರ್ ಪ್ರಚಾರಕರು ಗೌರವ ಕಾಪಾಡಿಕೊಳ್ಳಬೇಕು. ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸುವಂತಿಲ್ಲ ಎಂದು ತಿಳಿಸಿದ್ದಾರೆ.