ಮಂಡ್ಯ: ಲೋಕಸಭಾ ಚುನಾವಣೆಗೆ ಖ್ಯಾತ ಹೃದ್ರೋಗ ತಜ್ಞ, ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರು ಗ್ರಾಮಾಂತರ ಅಥವಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಇದೀಗ ಲೋಕಸಭಾ ಚುನಾವಣಾ ಸ್ಪರ್ಧೆ ಬಗ್ಗೆ ಸ್ವತ: ಡಾ.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮಂಜುನಾಥ್, ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಆದರೆ ನಾನಿನ್ನೂ ತೀರ್ಮಾನಿಸಿಲ್ಲ ಎಂದಿದ್ದಾರೆ.
ಹಲವೆಡೆಗಳಲ್ಲಿ ಜನರು ಚುನಾವಣೆಗೆ ನಿಲ್ಲುವಂತೆ ಒತ್ತಡ ಹಾಕುತ್ತಿದ್ದಾರೆ. ರಾಜಕೀಯಕ್ಕೆ ಬರಬೇಕಾ? ಲೋಕಸಭಾ ಚುನಾವಣೆಗೆ ನಿಲ್ಲಬೇಕಾ ಬೇಡವೇ ಎಂಬ ಬಗ್ಗೆ ಗೊಂದಲಗಳಿವೆ. ಲೋಕಸಭೆ ಪ್ರವೇಶ ಕೇವಲ ರಾಜಕೀಯ ಮೂಲಕವೇ ಅಲ್ಲ. ರಾಜಕೀಯವೇ ಬೇರೆ, ಲೋಕಸಭೆಯೇ ಬೇರೆ. ಸದ್ಯ ಆಲೋಚನೆ ಮಾಡುತ್ತಿದ್ದೇನೆ. ಮುಂದೆ ಈ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.