ಬೆಂಗಳೂರು: 2024ರ ಲೋಕಸಭಾ ಚುನಾವಣೆ ದಿನಾಂಕ ಇಂದು ಮಧ್ಯಾಹ್ನ ಘೋಷಣೆಯಾಗಲಿದೆ. ಚುನವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಲಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದ್ದು, ಲೋಕಸಭಾ ಚುನಾವಣಾ ದಿನಾಂಕ ಪ್ರಕಟಸಲಿದೆ. ಜೊತೆಗೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಕೂಡ ಘೋಷಣೆಯಾಗಲಿದೆ. ಆಂಧ್ರಪ್ರದೇಶ, ಓಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳ ಚುನಾವಣೆ ದಿನಾಂಕವೂ ಪ್ರಕಟವಾಗಲಿದೆ.
ಚುನಾವಣೆ ಘೋಷಣೆ ಬೆನ್ನಲ್ಲೇ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ನೀತಿ ಸಂಹಿತೆ ಜಾರಿ ಬಳಿಕ ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ ಇಲ್ಲಿದೆ ಮಾಹಿತಿ.
ನೀತಿ ಸಂಹಿತೆ ಜಾರಿ ಬಳಿಕ ಸಚಿವರು, ಶಾಸಕರು ಸರ್ಕಾರಿ ವೆಚ್ಚದಲ್ಲಿ ಚುನವಣಾ ರ್ಯಾಲಿ ನಡೆಸುವಂತಿಲ್ಲ. ಈ ಅವಧಿಯಲ್ಲಿ ಸಚಿವರು, ಶಾಸಕರು ತಮ್ಮ ಕಚೇರಿಗೆ ಹೋಗಲು ಮಾತ್ರ ಸರ್ಕಾರಿ ವಾಹನ ಬಳಸಬೇಕು. ಚುನಾವಣಾ ರ್ಯಾಲಿ ಹಾಗೂ ಪ್ರವಾಸಗಳಿಗೆ ಸರ್ಕಾರಿ ವಾಹನ ಬಳಸುವಂತಿಲ್ಲ.
ನೀತಿ ಸಂಹಿತೆ ಜಾರಿಯಾದ ಬಳಿಕ ಯಾವುದೇ ರಾಜಕೀಯ ಪಕ್ಷಕ್ಕೆ ಲಾಭವಾಗುವಂತೆ ಯಾವುದೇ ಸಂದರ್ಭದಲ್ಲಿ ಸರ್ಕಾರದ ಹಣವನ್ನು ಬಳಸುವಂತಿಲ್ಲ. ಸರ್ಕರದ ಘೋಷಣೆಗಳು, ಉದ್ಘಾಟನೆಗಳು, ಶಂಕುಸ್ಥಾಪನೆ ಮುಂತಾದ ಎಲ್ಲಾ ರೀತಿಯ ಕಾರ್ಯಕರಮಗಳನ್ನು ಆಯೋಜಿಸಲಾಗುವುದಿಲ್ಲ. ಕೆಲ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದರೆ ಅದನ್ನು ಮುಂದುವರೆಸಬಹುದು.
ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಸ್ಥಳವನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ. ನೀತಿ ಸಂಹಿತೆ ಬಳಿಕ ಸರ್ಕಾರ ಯಾವುದೇ ಅಧಿಕಾರಿ ಅಥವಾ ಉದ್ಯೋಗಿಯನ್ನು ವರ್ಗಾಯಿಸಲು ಅಥವಾ ಪೋಸ್ಟಿಂಗ್ ಮಾಡಲು ಸಾಧ್ಯವಿಲ್ಲ. ವರ್ಗಾವಣೆ ಅತಿ ಮುಖ್ಯವಾಗಿದ್ದರೆ ಮಾತ್ರ ಚುನಾವಣೆ ಆಯೋಗದಿಂದ ಅನುಮತಿ ಪಡೆದಿರಬೇಕು. ಸರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆ, ರ್ಯಾಲಿ, ಸಮಾವೇಶಗಳನ್ನು ಆಯೋಜಿಸುವಂತಿಲ್ಲ. ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
ಒಂದು ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡುವ ರಾಜಕೀಯ ನಾಯಕರನ್ನು ಪ್ರಚಾರದಿಂದ ನಿಷೇಧಿಸಬಹುದು. ಚುನಾವಣೆಯಿಂದ ಸ್ಪರ್ಧಿಸದಂತೆ ನಿರ್ಬಂಧಿಸಬಹುದು. ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಸಹ ದಾಖಲಿಸಬಹುದು.