ಚಾಮರಾಜನಗರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಅಕಾಂಕ್ಷಿಗಳ ಲಾಭಿ ಜೋರಾಗಿದೆ. ಈ ನಡುವೆ ವೈದ್ಯರೊಬ್ಬರು ತಮ್ಮ ಸರ್ಕಾರಿ ಹುದ್ದೆಯನ್ನು ತೊರೆದು ಲೋಕಸಭಾ ಚುನಾವಣೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಬೆನ್ನುಹುರಿ ತಜ್ಞ ಹಾಗೂ ಪ್ರಾಧ್ಯಾಪಕ ಡಾ.ಎನ್.ಎಸ್.ಮೋಹನ್ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಚ್ಛಿಸಿದ್ದು, ಸರ್ಕಾರಿ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಡಾ.ಎನ್.ಎಸ್.ಮೋಹನ್ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಳಿಯನಾಗಿದ್ದು, ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಸರ್ಕಾರಿ ವೈದ್ಯರಾಗಿ ಕೇವಲ 15 ವರ್ಷಗಳಾಗಿತ್ತು. ಇನ್ನೂ ಉನ್ನತ ಹುದ್ದೆಗೇರಲು ಸಾಕಷ್ಟು ಅವಕಾಶಗಳು ಇದ್ದವು. ಆದಾಗ್ಯೂ ರಾಜಕೀಯ ಆಸಕ್ತಿಯಿಂದಾಗಿ ಲಕ್ಷಾಂತರ ರೂಪಾಯಿ ವೇತನದ ಸರ್ಕಾರಿ ಹುದ್ದೆ ಬಿಟ್ಟು ಲೋಕಸಭಾ ಚುನಾವಣೆಗೆ ಧುಮುಕಿದ್ದಾರೆ.
ತಮಗೆ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ಸಿಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಯಾರ ಪರವೂ ಪ್ರಚಾರ ಮಾಡಲ್ಲ ಎಂದಿದ್ದಾರೆ. ಈ ನಡುವೆ ಅವರ ಅಳಿಯ ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.