ಬಾಗಲಕೋಟೆ: ಲೋಕಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ನಡುವೆ ರಾಜಕೀಯ ನಾಯಕರ ವಾಕ್ಪ್ರಹಾರ ತಾರಕಕ್ಕೇರಿದೆ. ಶಾಸಕ ವಿಜಯಾನಂದ ಕಾಶಪ್ಪನವರ್ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ವಿಜಾಪುರದಲ್ಲಿ ಒಂದು ಗೊಡ್ಡೆಮ್ಮೆ ಒದೆ. ಬರಿ ಒದರುವುದೇ ಅದರ ಕೆಲಸ ಎಂದು ಹೇಳುವ ಮೂಲಕ ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ.
ಯತ್ನಾಳ್ ಒಂದು ಗೊಡ್ಡೆಮ್ಮೆ ಇದ್ದಂತೆ. ಒದರೋದೇ ಅದರ ಕೆಲಸ. ಒದರಿ ಒದರಿ ಒಂದು ದಿನ ಗೊಡ್ಡೆಮ್ಮೆ ಸಾಯೋದೆ. ಯತ್ನಾಳ್ ನೀನು ಒದರುವುದನ್ನು ಮೊದಲು ನಿಲ್ಲಿಸು. ಬಾಯಿ ಬಂದ್ ಮಾಡಿದ್ರೆ ಒಳ್ಳೆದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಕೆ.ಎಸ್.ಈಶ್ವರಪ್ಪ ಒದರಿ ಒದರಿ ಈಗ ಸುಮ್ಮನೇ ಕೂತಿದ್ದಾನೆ. ಇದೇ ರೀತಿ ಒದರುತ್ತಿದ್ದರೆ ಈಶ್ವರಪ್ಪ ಸ್ಥಿತಿಯೇ ನಿನಗೂ ಆಗುತ್ತದೆ. ಏನು ಪಂಚಮಸಾಲಿ ಸಮುದಾಯದಲ್ಲಿ ಹುಟ್ಟಿದ್ದು ನೀನೊಬ್ಬನೇನಾ? ಸಮುದಾಯದ ಮೀಸಲಾತಿಗಾಗಿ ಎಲ್ಲರೂ ಸೇರಿ ಹೋರಾಟ ನಡೆಸುತ್ತಿಲ್ಲವೇ? ನಿನಗೆ ಮಾತ್ರ ಅಭಿಮಾನವೇ? ಮೊದಲು ಒದರುವುದನ್ನು ನಿಲ್ಲಿಸು ಎಂದು ಗದರಿದ್ದಾರೆ.