
ನವದೆಹಲಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಹಬ್ಬವೆಂದೇ ಹೇಳಲಾಗುವ ಲೋಕಸಭೆ ಚುನಾವಣೆ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.
ದೇಶಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶ ಕೂಡ ನಾಳೆ ಪ್ರಕಟವಾಗಲಿದೆ. ಲೋಕಸಭೆಯ 543 ಸ್ಥಾನಗಳಲ್ಲಿ ಸೂರತ್ ನಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 542 ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿದೆ.
ಏಪ್ರಿಲ್ 19 ರಂದು ಮೊದಲ ಹಂತದ ಮತದಾನದೊಂದಿಗೆ ಲೋಕಸಭೆ ಚುನಾವಣೆ ಆರಂಭವಾಗಿತ್ತು. ಜೂನ್ 1ರಂದು 7ನೇ ಹಾಗೂ ಕೊನೆಯ ಹಂತದ ಮತದಾನ ನಡೆದಿತ್ತು. 7 ಹಂತದಲ್ಲಿ ಒಟ್ಟಾರೆ ಶೇಕಡ 64 ರಷ್ಟು ಮತದಾನವಾಗಿದೆ.
ಬಿಜೆಪಿ ನೇತೃತ್ವದ ಎನ್.ಡಿ.ಎ. ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ನಿಖರವಾದ ಫಲಿತಾಂಶವನ್ನು ತಿಳಿಯಲು ನಾಳೆವರೆಗೆ ಕಾಯಬೇಕಿದೆ. ನಾಳೆ ಮಧ್ಯಾಹ್ನದೊಳಗೆ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ತೆರೆ ಬೀಳಲಿದೆ. ಲೋಕಸಭೆ ಗದ್ದುಗೆ ಯಾರಿಗೆ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.