ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ 358 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಕಾಂಗ್ರೆಸ್ 14, ಬಿಜೆಪಿ 11, ಜೆಡಿಎಸ್ 3 ಕ್ಷೇತ್ರಗಳಲ್ಲಿ ಉಮೇದುವಾರಿಕೆ ಸಲ್ಲಿಸಿವೆ. ಗುರುವಾರ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು, ಒಟ್ಟು 358 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಂದಿನಿಂದ ಪ್ರಚಾರದ ಅಖಾಡ ಮತ್ತಷ್ಟು ರಂಗೇರಲಿದೆ.
ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಎಲ್ಲಾ 14 ಕ್ಷೇತ್ರಗಳಿಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿ 11 ಕ್ಷೇತ್ರಗಳಲ್ಲಿ, ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 358 ಅಭ್ಯರ್ಥಿಗಳಿದ್ದ ಒಟ್ಟಾರೆ 492 ನಾಮಪತ್ರ ಸಲ್ಲಿಕೆಯಾಗಿದೆ. 25 ಮಹಿಳೆಯರು, 333 ಪುರುಷ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಶುಕ್ರವಾರ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಏಪ್ರಿಲ್ 8 ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಗುರುವಾರ ಒಂದೇ ದಿನ ಬರೋಬ್ಬರಿ 183 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಉಡುಪಿ -ಚಿಕ್ಕಮಗಳೂರು ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು, ಹಾಸನದಲ್ಲಿ 21 ಅಭ್ಯರ್ಥಿಗಳು, ದಕ್ಷಿಣ ಕನ್ನಡ 11 ಅಭ್ಯರ್ಥಿಗಳು, ಚಿತ್ರದುರ್ಗ 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ತುಮಕೂರು 22, ಮಂಡ್ಯ 27, ಮೈಸೂರು 28, ಚಾಮರಾಜನಗರ 25, ಬೆಂಗಳೂರು ಗ್ರಾಮಾಂತರ 31, ಬೆಂಗಳೂರು ಉತ್ತರ 25, ಬೆಂಗಳೂರು ಸೆಂಟ್ರಲ್ 32, ಬೆಂಗಳೂರು ದಕ್ಷಿಣ 34, ಚಿಕ್ಕಬಳ್ಳಾಪುರ 36, ಕೋಲಾರ 25 ಸೇರಿ ಒಟ್ಟು 358 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 161, ಪಕ್ಷೇತರರಿಂದ 211 ನಾಮಪತ್ರ ಸಲ್ಲಿಕೆಯಾಗಿವೆ.