ನವದೆಹಲಿ: ಲೋಕಸಭೆಯ ಸಂಸದ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಗಿರೀಶ್ ಬಾಪಟ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ಪುಣೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಗಿರೀಶ್ ಬಾಪಟ್ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದರು. ಕಳೆದ ಕೆಲವು ತಿಂಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.
ತಮ್ಮ ಸುದೀರ್ಘ ಮತ್ತು ಸುಪ್ರಸಿದ್ಧ ರಾಜಕೀಯ ಜೀವನದಲ್ಲಿ ಗಿರೀಶ್ ಬಾಪಟ್ ಅವರು ಸಂಸದರಾಗಿ, ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಸದಸ್ಯರಾಗಿ, ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವರಾಗಿ ಮತ್ತು ವಿವಿಧ ಸಂಸದೀಯ ಸಮಿತಿಗಳ ಸದಸ್ಯರಾಗಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.
ಟ್ರೇಡ್ ಯೂನಿಯನ್ ನಾಯಕರಾಗಿ ಪ್ರಾರಂಭಿಸಿದ ಗಿರೀಶ್ ಬಾಪಟ್ ಅವರು ರಾಜಕೀಯದಲ್ಲಿ ಉನ್ನತ ಶ್ರೇಣಿಗೆ ಏರಿದರು. ಬಾಪಟ್ ಅವರು ರಾಜಕೀಯ ವಲಯದಾದ್ಯಂತ ಸ್ನೇಹಿತರನ್ನು ಹೊಂದಿದ್ದಾರೆ ಎಂದು ಸಂಸದ ಬಾಪಟ್ ಅವರ ನಿಧನಕ್ಕೆ ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್ ಸಂತಾಪ ಸೂಚಿಸಿದ್ದಾರೆ.
ರಾಜಕೀಯದಲ್ಲಿ ಎಲ್ಲರನ್ನೂ ಒಳಗೊಂಡ ಹಿರಿಯ ನಾಯಕನನ್ನು ರಾಜ್ಯ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.