ನವದೆಹಲಿ: 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರು 18ನೇ ಲೋಕಸಭೆ ಚುನಾವಣೆ -2024 ರ ಏಳನೇ ಮತ್ತು ಕೊನೆಯ ಹಂತದಲ್ಲಿ ಜೂನ್ 1 ಶನಿವಾರದಂದು ಮತ ಚಲಾಯಿಸಲಿದ್ದಾರೆ.
ಉತ್ತರ ಪ್ರದೇಶದ 13, ಪಂಜಾಬ್‌ನಲ್ಲಿ 13, ಪಶ್ಚಿಮ ಬಂಗಾಳದ 9 ಸೇರಿದಂತೆ 57 ಲೋಕಸಭಾ ಕ್ಷೇತ್ರಗಳಲ್ಲಿ ಕೊನೆಯ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ನಾಳೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಮೊದಲ ಹಂತದ ಮತದಾನವು ಏಪ್ರಿಲ್ 19 ರಂದು ನಡೆಯಿತು, ಇದರಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು 88 ಸ್ಥಾನಗಳಲ್ಲಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದರು. 11 ರಾಜ್ಯಗಳಲ್ಲಿ 93 ಸ್ಥಾನಗಳೊಂದಿಗೆ ಮೂರನೇ ಹಂತದ ಮತದಾನವು ಮೇ 7 ರಂದು, ಮೇ 13 ರಂದು ನಾಲ್ಕನೇ ಹಂತ, ಮೇ 20ರಂದು 5ನೇ ಹಂತ, ಮೇ 25 ರಂದು 6ನೇ ಹಂತ ಪೂರ್ಣಗೊಂಡಿತ್ತು. ಎಲ್ಲಾ ಸ್ಥಾನಗಳ ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಲಾಗುತ್ತದೆ.
ಮೊದಲ ಹಂತದಲ್ಲಿ ಶೇ.66.14ರಷ್ಟು ಮತದಾನವಾಗಿದ್ದು, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನವಾಗಿದೆ. ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಹಂತಗಳಲ್ಲಿ ಕ್ರಮವಾಗಿ ಶೇ.65.68, ಶೇ.69.16, ಶೇ.62.20 ಮತ್ತು ಶೇ.63.37ರಷ್ಟು ಮತದಾನವಾಗಿದೆ.
ಕೊನೆಯ ಹಂತದಲ್ಲಿ ಹಲವು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಮಹೇಂದ್ರ ನಾಥ್ ಪಾಂಡೆ, ನೀರಜ್ ಶೇಖರ್, ಪಂಕಜ್ ಚೌಧರಿ, ರವಿ ಕಿಶನ್, ಅಪ್ನಾ ದಳದ ಅನುಪ್ರಿಯಾ ಪಟೇಲ್, ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ರಾಯ್ ಮತ್ತು ಅಖಿಲೇಶ್ ಪ್ರತಾಪ್ ಸಿಂಗ್, ಸಮಾಜವಾದಿ ಪಕ್ಷದ(ಎಸ್‌ಪಿ) ಅಭ್ಯರ್ಥಿಗಳಾದ ಅಫ್ಜಲ್ ಅನ್ಸಾರಿ, ರಮೇಶ್ ಚಂದ್ ಬಿಂದ್, ವೀರೇಂದ್ರ ಸಿಂಗ್ ಮತ್ತು ಕಾಜಲ್ ನಿಶಾದ್ ಸ್ಪರ್ಧಿಸಿದ್ದಾರೆ.