ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಗುಲಾಂ ನಬಿ ಆಜಾದ್ ಲೋಕಸಭೆ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮಾಜಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥರಾದ ಮುಫ್ತಿ ಅನಂತನಾಗ್-ರಾಜೌರಿ ಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ.
ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ(ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರು ಅನಂತನಾಗ್-ರಜೌರಿ ಕ್ಷೇತ್ರದಿಂದ ತಮ್ಮ ಅಭ್ಯರ್ಥಿಯನ್ನು ಘೋಷಿಸಿದರು. ಆರಂಭದಲ್ಲಿ, ನಾನು ಸ್ಪರ್ಧಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ನಮ್ಮ ಎಲ್ಲಾ ಸಹೋದ್ಯೋಗಿಗಳು ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಸ್ಪರ್ಧಿಸಲು ಯೋಜಿಸಿದ್ದೇನೆ ಎಂದು ಆಜಾದ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವಕ್ಕಾಗಿ ಹೋರಾಡಲು ಬಯಸುವುದಾಗಿ ಆಜಾದ್ ಹೇಳಿದ್ದು, ದೊಡ್ಡ ಸಮಸ್ಯೆಯೆಂದರೆ ನಾವು ರಾಜ್ಯತ್ವ ಹೊಂದಿಲ್ಲ. ನಮ್ಮ ರಾಜ್ಯ ಕೇಂದ್ರಾಡಳಿತ ಪ್ರದೇಶವಾಗಿದೆ. 370ನೇ ವಿಧಿಯನ್ನು ರದ್ದುಪಡಿಸಿದಾಗ ನಾನು ರಾಜ್ಯಸಭೆಯಲ್ಲಿ ಹೋರಾಟ ನಡೆಸಿದ್ದೆ. ನಾನು ಲೋಕಸಭೆಯಲ್ಲೂ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡಲು ಬಯಸುತ್ತೇನೆ. ಲೋಕಸಭೆಯಲ್ಲಿ ನನ್ನ ಮೊದಲ ಹೋರಾಟ ರಾಜ್ಯ ಸ್ಥಾನಮಾನದ ಮರುಸ್ಥಾಪನೆಗಾಗಿ ಎಂದು ತಿಳಿಸಿದ್ದಾರೆ.