ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಹಾಸ್ಯನಟ ಶ್ಯಾಮ್ ರಂಗೀಲಾ ಅವರು ಸಲ್ಲಿಸಿದ್ದ ಅಫಿಡವಿಟ್ ಅನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ತಿರಸ್ಕರಿಸಿದೆ.
55 ಅಭ್ಯರ್ಥಿಗಳ ಪೈಕಿ 36 ಅಭ್ಯರ್ಥಿಗಳ ಫಾರ್ಮ್‌ಗಳನ್ನು ತಿರಸ್ಕರಿಸಲಾಗಿದೆ ಎಂದು ಇಸಿಐ ವೆಬ್‌ಸೈಟ್ ವರದಿ ಮಾಡಿದೆ. ಆದರೆ, ಪಿಎಂ ಮೋದಿ ಮತ್ತು ಕಾಂಗ್ರೆಸ್‌ನ ಅಜಯ್ ರೈ ಸೇರಿದಂತೆ 15 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಅನುಮೋದಿಸಲಾಗಿದೆ. ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶ್ಯಾಮ್ ರಂಗೀಲಾ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ಮೇ 10ರಿಂದ ನಾಮಪತ್ರ ಸಲ್ಲಿಸಲು ಸತತ ಪ್ರಯತ್ನ ನಡೆಸಿದರೂ, ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಿದ ದಿನ ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸದಂತೆ ಅಡ್ಡಿಪಡಿಸಿದ್ದರು ಎಂದು ರಂಗೀಲಾ ಬಹಿರಂಗಪಡಿಸಿದ್ದಾರೆ. ಚುನಾವಣಾ ಆಯೋಗವು ಈ ಚುನಾವಣಾ ಪ್ರಕ್ರಿಯೆಯನ್ನು ಆಟವಾಗಿ ಪರಿವರ್ತಿಸಿದೆ. ಇಂದು ನನ್ನ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ನನ್ನ ದಾಖಲೆಗಳಲ್ಲಿ ಯಾವುದೇ ಕೊರತೆ ಇಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯವಾದ ದಾಖಲೆಗಳು ಮತ್ತು ಠೇವಣಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ನಿನ್ನೆ, ನನಗೆ ಮಧ್ಯಾಹ್ನ 3 ಗಂಟೆಯ ನಂತರ ಮಾತ್ರ ಪ್ರವೇಶ ನೀಡಲಾಯಿತು. ಇಂದು, ಏಕೆ ಎಂದು ನನಗೆ ಅರ್ಥವಾಯಿತು. ಸಲ್ಲಿಸಲು ಅಗತ್ಯವಿರುವ ಪ್ರಮಾಣ ವಚನ ಪತ್ರವು ಕಾಣೆಯಾಗಿದೆ ಎಂದು ಜಿಲ್ಲಾಧಿಕಾರಿ ನನಗೆ ತಿಳಿಸಿ, ನನ್ನ ನಾಮಪತ್ರವನ್ನು ತಿರಸ್ಕರಿಸಿದರು ಎಂದು ಹೇಳಿದ್ದಾರೆ.