ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ 13 ದಿನಗಳಷ್ಟೇ ಬಾಕಿ ಇವೆ. ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕಾರ್ಯತಂತ್ರ ರೂಪಿಸಿವೆ. ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ -ಜೆಡಿಎಸ್ ಮೈತ್ರಿಕೂಟಕ್ಕೆ ಆಘಾತ ಎದುರಾಗಿದೆ. ಲೋಕ ಪೋಲ್ ಸಮೀಕ್ಷೆ ಬಿಡುಗಡೆಯಾಗಿದ್ದು, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಲಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದ ಸುಮಾರು 10ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಲೋಕ ಪೋಲ್ ಸಮೀಕ್ಷೆ ಭವಿಷ್ಯ ನುಡಿದಿದೆ. ಕಾಂಗ್ರೆಸ್ 20 ಕ್ಷೇತ್ರಗಳ ಸಮೀಪಕ್ಕೆ ಬರಲಿದೆ. ಬಿಜೆಪಿ -ಜೆಡಿಎಸ್ ಮೈತ್ರಿಕೂಟ 11ರಿಂದ 13 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದು, ಕಾಂಗ್ರೆಸ್ 15 ರಿಂದ 17 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
15 ದಿನದ ಹಿಂದೆ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಲಾಗಿದ್ದು, ಕಾಂಗ್ರೆಸ್ 12ರಿಂದ 14 ಕ್ಷೇತ್ರಗಳಲ್ಲಿ, ಬಿಜೆಪಿ 10 ರಿಂದ 12 ಕ್ಷೇತ್ರಗಳಲ್ಲಿ, ಜೆಡಿಎಸ್ ಒಂದರಿಂದ ಎರಡು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿತ್ತು. ಈಗ ಮತ್ತೆ ಅನೇಕ ಕ್ಷೇತ್ರಗಳಲ್ಲಿ ವ್ಯತ್ಯಾಸವಾಗಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ.
ನಿರುದ್ಯೋಗ, ಹಣದುಬ್ಬರ, ಪ್ರಧಾನಿ ಅಭ್ಯರ್ಥಿ, ಯೋಜನೆಗಳು, ಕನ್ನಡ ಅಭಿಮಾನ, ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಸಮೀಕ್ಷೆಯಲ್ಲಿ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.