ನವದೆಹಲಿ: 150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮಾಹಿತಿ ಕೇಳಿದೆ.
ಜೂನ್ 4 ರಂದು ನಡೆಯಲಿರುವ ಮತ ಎಣಿಕೆಗೆ ಮುನ್ನ ಗೃಹ ಸಚಿವ ಅಮಿತ್ ಶಾ ಅವರು 150 ಜಿಲ್ಲಾಧಿಕಾರಿಗಳು ಮತ್ತು ಕಲೆಕ್ಟರ್‌ಗಳಿಗೆ ಕರೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಭಾರತ ಚುನಾವಣಾ ಆಯೋಗವು(ಇಸಿಐ) ಭಾನುವಾರ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರಿಂದ ವಾಸ್ತವ ಮಾಹಿತಿಯನ್ನು ಕೇಳಿದೆ.
ರಮೇಶ್ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗವು ಮುಂದಿನ ಅಗತ್ಯ ಕ್ರಮಕ್ಕಾಗಿ ಇಂದು(ಜೂನ್ 2) ಸಂಜೆಯೊಳಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಯನ್ನು ಕೋರಿದೆ.
ಮತ ಎಣಿಕೆ ಪ್ರಕ್ರಿಯೆಯು ಪ್ರತಿಯೊಬ್ಬ ಆರ್‌ಒ(ರಿಟರ್ನಿಂಗ್ ಆಫೀಸರ್) ಮೇಲೆ ವಹಿಸುವ ಪವಿತ್ರ ಕರ್ತವ್ಯವಾಗಿದೆ. ಹಿರಿಯ, ಜವಾಬ್ದಾರಿಯುತ ಮತ್ತು ಅನುಭವಿ ನಾಯಕರ ಇಂತಹ ಸಾರ್ವಜನಿಕ ಹೇಳಿಕೆಗಳು ಅನುಮಾನ ಉಂಟುಮಾಡುತ್ತವೆ. ಯಾವುದೇ ಡಿಎಂ ಯಾವುದೇ ಪ್ರಭಾವ ಬೀರಿದಲ್ಲಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.