ಲೋಕಸಭೆ ಚುನಾವಣೆ 2024 ಫಲಿತಾಂಶ ಹೊರಬಿದ್ದಿದ್ದು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಎನ್ ಡಿ ಎ ಕೂಟ ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಹೊಂದಿದ್ದರೂ ಇಂಡಿ ಮೈತ್ರಿ ಕೂಟ ಕೂಡ ಸರ್ಕಾರ ರಚಿಸುವ ಲೆಕ್ಕಾಚಾರದಲ್ಲಿದೆ.
ಏಕಪಕ್ಷೀಯ ಸ್ಪರ್ಧೆ ಎಂದು ನಿರೀಕ್ಷಿಸಲಾಗಿದ್ದ ಫಲಿತಾಂಶದಲ್ಲಿ ಎನ್‌ಡಿಎ ಮತ್ತು ಇಂಡಿ ಮೈತ್ರಿ ಬಣಗಳ ನಡುವೆ ನೆಕ್ ಟು ನೆಕ್ ಫೈಟ್ ಆಗುತ್ತಿದೆ. ನಿಕಟ ಹೋರಾಟದ ನಡುವೆ ಇಂಟರ್ನೆಟ್ ಬಳಕೆದಾರರು ನಟ ಶಾರುಖ್ ಖಾನ್ ಅಭಿನಯದ ‘ಜವಾನ್’ ಚಲನಚಿತ್ರವನ್ನು ಫಲಿತಾಂಶಕ್ಕೆ ಹೋಲಿಸುತ್ತಿದ್ದಾರೆ.
ಶಾರುಖ್ ಖಾನ್ ಯಾವುದೇ ನಿರ್ದಿಷ್ಟ ಪಕ್ಷದೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲದಿದ್ದರೂ, ಬ್ಲಾಕ್‌ಬಸ್ಟರ್ ಜವಾನ್‌ನ ಡೈಲಾಗ್ ಮತದಾರರ ಕಣ್ಣು ತೆರೆಸಿದೆ ಎಂಬುವಂತೆ ಪ್ರಶಂಸಿಸಲ್ಪಟ್ಟಿದೆ. ಅಟ್ಲೀ ನಿರ್ದೇಶಕನ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಶಾರುಖ್ ಖಾನ್ ಮತದಾನದ ಹಕ್ಕನ್ನು ಎಚ್ಚರಿಕೆಯಿಂದ ಚಲಾಯಿಸುವ ಮಹತ್ವದ ಕುರಿತು ಭಾವೋದ್ವೇಗದ ಡೈಲಾಗ್ ಹೇಳುತ್ತಾರೆ.
“ಯಾವುದೇ ಸಣ್ಣ ವಸ್ತುವನ್ನು ಕೊಳ್ಳುವಾಗಲೂ ಸಾವಿರಾರು ಪ್ರಶ್ನೆ ಕೇಳುವ ನಾವು ಸರ್ಕಾರವನ್ನು ಆಯ್ಕೆ ಮಾಡುವಾಗ ಮಾತ್ರ ಈ ಕೆಲಸ ಮಾಡುವುದಿಲ್ಲ. ಭಯ, ಹಣ, ಜಾತಿ, ಧರ್ಮ, ಸಮುದಾಯಕ್ಕೆ ಮತ ಹಾಕುವ ಬದಲು, ನಿಮ್ಮ ಮತ ಕೇಳಲು ಬಂದವರಿಗೆ ಪ್ರಶ್ನೆಗಳನ್ನು ಕೇಳಿ. ಮುಂದಿನ ಐದು ವರ್ಷಗಳಲ್ಲಿ ಅವರು ನಿಮಗಾಗಿ ಏನು ಮಾಡುತ್ತಾರೆ ಎಂದು ಕೇಳಿ. ನಿಮ್ಮ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅವರ ಚಿಕಿತ್ಸೆಗೆ ಅವರು ಹೇಗೆ ಸಹಾಯ ಮಾಡುತ್ತಾರೆ? ಎಂಬುದನ್ನ ಪ್ರಶ್ನಿಸಿ” ಎಂದು ಸಂಭಾಷಣೆ ಹೇಳಿದ್ದರು.
ಈ ಡೈಲಾಗ್ ನ ದೃಶ್ಯವನ್ನು ಹಂಚಿಕೊಂಡಿರುವ ನೆಟ್ಟಿಗರು “ಲೋಕಸಭಾ ಚುನಾವಣೆ 2024 ರ ಮೊದಲು ಈ ಅತ್ಯುತ್ತಮ ಚಿತ್ರ ಜವಾನ್‌ಗಾಗಿ ಎಲ್ಲಾ ಭಾರತೀಯ ರಾಜಕಾರಣಿಗಳು ಶಾರುಖ್ ಖಾನ್ ಗೆ ಧನ್ಯವಾದ ಹೇಳಬೇಕು.” ಎಂದಿದ್ದಾರೆ. ಕೆಲವರು ಅಭಿನಂದನೆಗಳು ಕಿಂಗ್ ಶಾರುಖ್ ಖಾನ್ ‘ಜವಾನ್’ ಚಿತ್ರ ಚುನಾವಣೆಯಲ್ಲಿ ದೊಡ್ಡ ಕೆಲಸ ಮಾಡಿದೆ. ಭಾರತದ ಜನರು ಮತ ಹಾಕಿದ್ದು ಧರ್ಮ ಅಥವಾ ಜಾತಿಯ ಪ್ರಕಾರ ಅಲ್ಲ, ಅವರು ಮತ ಹಾಕಿದ್ದು ಕ್ರಿಯೆಗಳು ಮತ್ತು ನಂಬಿಕೆಯ ಪ್ರಕಾರ” ಎಂದಿದ್ದಾರೆ.
ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾದ ಜವಾನ್, ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿದೆ. ಹೀಗಾಗಿ ಜನಸಾಮಾನ್ಯರ ಮೇಲೆ ಅದರ ಪ್ರಭಾವ ಹೆಚ್ಚಿದೆ.