
ನವದೆಹಲಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೆ ಮೊದಲೇ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಪ್ರವಾಸ ಕೈಗೊಂಡಿದ್ದಾರೆ. 12 ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಪ್ರಧಾನಿ 29 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಇಂದಿನಿಂದ 10 ದಿನಗಳಲ್ಲಿ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 29 ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸುವರು. ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಗೆ ಪ್ರಧಾನಿ ಭೇಟಿ ನೀಡಲಿದ್ದಾರೆ.
ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ 12 ರಾಜ್ಯಗಳಿಗೆ ಪ್ರಧಾನಿ ಭೇಟಿ ನೀಡಲಿದ್ದು, ಅಭಿವೃದ್ಧಿಯ ಹೊಳೆಯನ್ನೇ ಹರಿಸಲಿದ್ದಾರೆ. 29 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ಸಾರ್ವಜನಿಕ ಸಭೆ ನಡೆಸಿ ಚುನಾವಣಾ ಕಹಳೆ ಮೊಳಗಿಸಲಿದ್ದಾರೆ. ಈ ಮೂಲಕ ಅವರು ಲೋಕಸಭೆ ಚುನಾವಣೆಗೆ ಮೊದಲೇ ಅನೌಪಚಾರಿಕವಾಗಿ ಬಿಜೆಪಿ ಮತ ಬೇಟೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಏಪ್ರಿಲ್, ಮೇನಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಮಾರ್ಚ್ ಎರಡನೇ ವಾರ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆಯಿದ್ದು, ಅಷ್ಟರೊಳಗೆ ಸರ್ಕಾರದ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಂಡ ಲಕ್ಷಾಂತರ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮ, ಯೋಜನೆಗಳನ್ನು ಜನರಿಗೆ ತಿಳಿಸಿ ಬಿಜೆಪಿ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.