ಕೊಪ್ಪಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಕೊಪ್ಪಳದ ಕುಷ್ಟಗಿಯ ಕೆಲ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಲಾಗಿದೆ.
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕರಿಸಿದ್ದಾರೆ. ವಾರದ ಹಿಂದಷ್ಟೇ ಇದೇ ಬಡಾವಣೆಯ ನಿವಾಸಿ ಲಕ್ಷ್ಮೀ ಎಂಬುವವರು ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದರು. ಮಗು ಕೂಡ ಸಾವನ್ನಪ್ಪಿತ್ತು. ವೈದ್ಯರ ನಿರ್ಲಕ್ಷ್ಯದಿಂದಾಗಿ ತಾಯಿ-ಮಗು ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಹಾಗೂ ಬಡಾವಣೆಯ ಜನರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕರಿಸಿದ್ದಾರೆ.
ಇದೇ ವೇಳೆ ಕೊಪ್ಪಳದ ಕುಕನೂರು ಪಟ್ತಣದ 19ನೇ ವಾರ್ಡ್ ನಲ್ಲಿಯೂ ಮತದಾನ ಬಹಿಷ್ಕರಿಸಲಾಗಿದೆ. ಗುದ್ನೆಪ್ಪನಮಠದ ದೇವಸ್ಥಾನ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಫಡೆಯಬೇಕು ಎಂದು ಆಗ್ರಹಿಸಿ ಈ ಭಾಗದ ಜನ ಮತದಾನ ಬಹಿಷ್ಕರಿಸಿದ್ದಾರೆ.