ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ಕರೆದುಕೊಂಡು ಬಂದು ಅಕ್ರಮ ಬಂಧನದಲ್ಲಿರಿಸಿ ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡಿದ್ದ ಸಂಘಟನೆಯೊಂದರ ಮುಖ್ಯಸ್ಥೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಎಸ್. ಮಂಜುಳಾ, ಆಕೆಯ ಸಹಚರ ಬ್ರಹ್ಮೇಂದ್ರ ಮತ್ತು ಲಾಡ್ಜ್ ಮಾಲೀಕ ಸಂತೋಷ್ ಬಂಧಿತ ಆರೋಪಿಗಳು. ಮಂಡ್ಯ ಜಿಲ್ಲೆಯ 20 ವರ್ಷದ ಯುವತಿಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಬಂದಿದ್ದ ಮಂಜುಳಾ ಶಿವಾನಂದ ಸರ್ಕಲ್ ಸಮೀಪದ ಲಾಡ್ಜ್ ನಲ್ಲಿ ಅಕ್ರಮ ಬಂಧನದಲ್ಲಿ ಇರಿಸಿದ್ದಳು. ಲೈಂಗಿಕ ಕೃತ್ಯಕ್ಕೆ ಯುವತಿಯನ್ನು ಬಳಸಿಕೊಂಡಿದ್ದು, ಈ ದಂಧೆಗೆ ಮಂಜುಳಾ ಸಹಚರ ಮತ್ತು ಲಾಡ್ಜ್ ಮಾಲೀಕ ನೆರವು ನೀಡಿದ್ದರು.
ಲಾಡ್ಜ್ ನಲ್ಲಿ ಅಕ್ರಮ ಬಂಧನದಲ್ಲಿದ್ದ ಯುವತಿ ಕೊನೆಗೆ ತನ್ನ ಸ್ನೇಹಿತನನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ಆತ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಪೊಲೀಸರು ಲಾಡ್ಜ್ ಮೇಲೆ ದಾಳಿ ನಡೆಸಿ ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.