ದಾವಣಗೆರೆ: ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು ಹಿನ್ನೆಲೆಯಲ್ಲಿ ಲಾಕಪ್ ಡೆತ್ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಯ ಸಂಬಂಧಿಕರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಘಟನೆ ಚನ್ನಗಿರಿಯಲ್ಲಿ ನಡೆದಿದೆ.
ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದಿದ್ದು, ಕಲ್ಲು ತೂರಾಟ ನಡೆಸಲಾಗಿದೆ. ಈ ವೇಳೆ 11 ಪೊಲೀಸರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ 10 ಪೊಲೀಸ್ ವಾಹನಗಳು ಜಖಂ ಗೊಂಡಿವೆ.
ಪ್ರಕರಣದ ಬಗ್ಗೆ ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಮಾತನಾಡಿದ್ದು, ಮೃತ ಆದಿಲ್ ನನ್ನು ಶುಕ್ರವಾರ ಪೊಲೀಸರು ಠಾಣೆಗೆ ಕರೆತಂದಿದ್ದರು. ಬಳಿಕ ಆದಿಲ್ ಠಾಣೆಯಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ಆದಿಲ್ ಪೊಲೀಸ್ ಠಾಣೆಯಲ್ಲಿ 6-7 ನಿಮಿಷ ಕೂಡ ಇಲ್ಲ. ಆದರೂ ಮೃತನ ಸಂಬಂಧಿಕರು ಲಾಕಪ್ ಡೆತ್ ಎಂದು ಆರೋಪಿಸುತ್ತಿದ್ದಾರೆ. ನಮ್ಮಲ್ಲಿಯೂ ಸಿಸಿ ಕ್ಯಾಮಾರಗಳಿವೆ. ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.