ಬೆಂಗಳೂರು: ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಯಮ ಸಡಿಲಿಕೆ ಮಾಡಿದ್ದು ಅಗತ್ಯ ವಸ್ತುಗಳನ್ನು ತರಲು ವಾಹನ ಬಳಕೆ ಮಾಡಲು ಅವಕಾಶ ನೀಡಲಾಗಿದೆ.
ಮನೆ ಸಮೀಪದ ಅಂಗಡಿಗಳಿಂದ ದಿನಸಿ, ತರಕಾರಿ ಅಗತ್ಯ ವಸ್ತುಗಳ ಖರೀದಿಗೆ ಜನ ವಾಹನ ಬಳಸಬಹುದು. ಆದರೆ, ಬೇಕಾಬಿಟ್ಟಿಯಾಗಿ ಹೊರಗಡೆ ತಿರುಗಾಡುವಂತಿಲ್ಲ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ವಾಹನ ಬಳಸಬಹುದು.
ಈ ಮೊದಲು ನಡೆದುಕೊಂಡೇ ಹೋಗಿ ಅಗತ್ಯ ವಸ್ತುಗಳನ್ನು ತರಬೇಕು ಎಂದು ಸರ್ಕಾರ ಆದೇಶಿಸಿತ್ತು. ಇದರಿಂದ ಭಾರಿ ತೊಂದರೆಯಾಗಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ಕಿಲೋಮೀಟರ್ ದೂರದವರೆಗೂ ನಡೆದುಕೊಂಡು ಹೋಗಿ ಬರಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅಗತ್ಯ ವಸ್ತು ಖರೀದಿಗೆ ವಾಹನ ಬಳಸಬಾರದೆಂಬ ನಿಯಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ನಿಯಮ ಸಡಿಲಿಸಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು, ಸಮೀಪದ ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ತರಲು ವಾಹನ ಬಳಕೆ ಮಾಡಬಹುದು. ಆದರೆ, ಬೇಕಾಬಿಟ್ಟಿಯಾಗಿ ಓಡಾಡುವಂತಿಲ್ಲ. ಅವಕಾಶವನ್ನು ಅಗತ್ಯವಸ್ತುಗಳ ತರಲು ಮಾತ್ರ ಬಳಸಿ. ಬೇಕಾಬಿಟ್ಟಿ ಓಡಾಡದೇ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.