ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ಡೌನ್ ನಿಯಮ ಸಡಿಲಿಕೆ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಹಲವು ಚಟುವಟಿಕೆಗಳು ನಡೆಸಲು ಅವಕಾಶ ನೀಡಲಾಗಿದೆ.
ಎಲ್ಲಾ ಕಾರ್ಖಾನೆಗಳಲ್ಲಿ ಶೇಕಡ 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಗಾರ್ಮೆಂಟ್ ಕಾರ್ಖಾನೆಗಳಿಗೆ ಶೇಕಡ 30 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು. ಅಗತ್ಯವಸ್ತುಗಳ ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಎಲ್ಲಾ ನಿರ್ಮಾಣ ಚಟುವಟಿಕೆ ಆರಂಭಿಸಲು ಅನುಮತಿ ನೀಡಲಾಗಿದ್ದು, ನಿರ್ಮಾಣ ಚಟುವಟಿಕೆಗೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ಪಾರ್ಕ್ ತೆರೆಯಲು ಅನುಮತಿ ನೀಡಿದ್ದು, ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಬಹುದು. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಸಂಚರಿಸಬೇಕು. ಅಗತ್ಯವಿದ್ದರೆ ಮಾತ್ರ ಅಂತರ ಜಿಲ್ಲಾ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಅನಾರೋಗ್ಯ ಸಂದರ್ಭದಲ್ಲಿ ತುರ್ತು ಸಂಚಾರಕ್ಕೆ ಅವಕಾಶವಿದ್ದು, ಸರಕು ಸಾಗಣೆ ಮತ್ತು ಆನ್ಲೈನ್ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಅಂತರ್ಜಾಲ, ಟೆಲಿಕಾಂ ಸೇವೆ ಸಿಬ್ಬಂದಿ, ಮೆಡಿಕಲ್ ಸಿಬ್ಬಂದಿ ಸಂಚರಿಸಲು ಅವಕಾಶ ಇದೆ. ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶ ಇದ್ದು, ಟಿಕೆಟ್ ತೋರಿಸಿ ಪ್ರಯಾಣಿಸಬಹುದು.
ಇನ್ನುಳಿದಂತೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. ಸಂಜೆ 7 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ, ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಬೆಂಗಳೂರು ನಗರ ಸೇರಿದಂತೆ 19 ಜಿಲ್ಲೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಉಳಿದ 11 ಜಿಲ್ಲೆಗಳಲ್ಲಿ ನಿರ್ಬಂಧ ಮುಂದುವರೆಯಲಿದೆ.