ಬೆಂಗಳೂರು: ಲಾಕ್ಡೌನ್ ಸಡಿಲ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಜೂನ್ 21 ರ ವರೆಗೆ ಲಾಕ್ ಡೌನ್ ವಿಸ್ತರಿಸಬೇಕೆಂಬ ಸಲಹೆ ಕೇಳಿಬಂದಿದ್ದು, ಇದರ ಜೊತೆಗೆ ಕೆಲವು ವಲಯಗಳಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಅಗತ್ಯ ವಸ್ತು ಖರೀದಿಗೆ ಸಮಯ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಬೆಳಗ್ಗೆ 10 ಗಂಟೆ ವರೆಗಿನ ಅವಧಿಯನ್ನು ಕೊಂಚ ವಿಸ್ತರಣೆ ಮಾಡಲಾಗುವುದು ಎಂದು ಹೇಳಲಾಗಿದೆ. ಇನ್ನು ರೈತರ ನೆರವಿಗೆ ಧಾವಿಸಿದ ಸರ್ಕಾರ, ರೈತರ ಬೆಳೆ ನಷ್ಟ ತಪ್ಪಿಸಲು ಕ್ರಮ ಕೈಗೊಳ್ಳಲಿದೆ. ರೈತರಿಂದಲೇ ನೇರವಾಗಿ ಉತ್ಪನ್ನ ಖರೀದಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಕೆಲವು ವಲಯಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ. ಸೀರಿಯಲ್ ಚಿತ್ರೀಕರಣಕ್ಕೆ, ಸಲೂನ್ ಗಳಿಗೆ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ವರ್ಕ್ ಶಾಪ್ ಆರಂಭಿಸಲು ಷರತ್ತು ಬದ್ಧ ಅನುಮತಿ ನೀಡಬಹುದು. ಗ್ಯಾರೇಜ್, ಬುಲ್ಡೋಜರ್, ಜನರೇಟರ್ ರಿಪೇರಿ, ರಫ್ತು ವಲಯದ ಕೈಗಾರಿಕೆಗಳಿಗೆ ವಿನಾಯಿತಿ ನೀಡಬಹುದು. ಕಬ್ಬಿಣ ಉಕ್ಕು ಆಧಾರಿತ ಕೈಗಾರಿಕೆ, ಎಲೆಕ್ಟ್ರಾನಿಕ್ ಕಂಪನಿಗಳಿಗೆ ವಿನಾಯಿತಿ ನೀಡಬಹುದು. ಆರ್ಥಿಕ ಚೇತರಿಕೆ ಉದ್ದೇಶದಿಂದ ಮತ್ತು ಕಾರ್ಮಿಕರಿಗೆ ನಿರುದ್ಯೋಗ ತಪ್ಪಿಸಲು ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಬಹುದು ಎಂದು ಹೇಳಲಾಗಿದೆ.
ತಜ್ಞರು, ಅನೇಕ ಸಚಿವರು ಲಾಕ್ ಡೌನ್ ವಿಸ್ತರಣೆಗೆ ಸಲಹೆ ನೀಡಿದ್ದು, ಜೂನ್ 21 ರ ವರೆಗೆ ಲಾಕ್ ಡೌನ್ ವಿಸ್ತರಿಸಿ ಕೆಲವು ವಲಯಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ.