ರಾಜ್ಯದಲ್ಲಿ ಇಂದಿನಿಂದ ಮೇ 24 ರ ವರೆಗೆ ಕಠಿಣ ಲಾಕ್ ಡೌನ್ ಜಾರಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಮೇ 10 ರ ಬೆಳಿಗ್ಗೆ 6 ಗಂಟೆಯಿಂದ ಮೇ 24ರ ಬೆಳಿಗ್ಗೆ 6 ಗಂಟೆಯ ವರೆಗೆ ಗೈಡ್ ಲೈನ್ಸ್ ಜಾರಿಯಲ್ಲಿರಲಿದೆ.
ಈ ಅವಧಿಯಲ್ಲಿ ಬಸ್, ಮೆಟ್ರೋ, ರೈಲು ಸಂಚಾರ ಇರುವುದಿಲ್ಲ. ಈಗಾಗಲೇ ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು ಸಂಚರಿಸಲಿವೆ.
ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಸಂಚರಿಸಲು ಅವಕಾಶವಿದೆ.
ಶಾಲೆ, ಕಾಲೇಜುಗಳು, ಶಿಕ್ಷಣ/ ಕೋಚಿಂಗ್ ಸಂಸ್ಥೆಗಳ ತರಗತಿಗಳು ನಡೆಯುವುದಿಲ್ಲ.
ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಆಹಾರ ಮಳಿಗೆಗಳು ಪಾರ್ಸೆಲ್ ಹಾಗೂ ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುವುದು.
ಸಿನೆಮಾ ಹಾಲ್ ಗಳು, ಶಾಪಿಂಗ್ ಮಾಲ್ ಗಳು, ಜಿಮ್ನೇಸಿಯಂಗಳು, ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣ, ಈಜುಕೊಳ, ಉದ್ಯಾನವನಗಳು, ಮನರಂಜನಾ ಪಾರ್ಕ್ ಗಳು, ಕ್ಲಬ್ ಗಳು, ಥಿಯೇಟರ್ ಗಳು, ಬಾರ್ ಗಳು ಮತ್ತು ಸಭಾಂಗಣ, ಸಮುದಾಯ ಭವನಗಳಂತಹ ಸ್ಥಳಗಳು ಮುಚ್ಚಲಿವೆ.
ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳನ್ನು ನಿಷೇಧಿಸಲಾಗಿದೆ.
ಎಲ್ಲ ಧಾರ್ಮಿಕ ಸ್ಥಳಗಳು/ ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸಲಿವೆ.
ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆಗಳಿಗೆ ಅವಕಾಶ ನೀಡಲಾಗುವುದು.
ಎಲ್ಲ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು.
ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗುವುದು.
ಸಾರ್ವಜನಿಕರ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಕೆಲವು ವಿನಾಯಿತಿಗಳನ್ನು ಮಾತ್ರ ನೀಡಲಾಗಿದೆ.
ಈ ಮಾರ್ಗಸೂಚಿಯಲ್ಲಿ ಅನುಮತಿಸಿದ ಸಂದರ್ಭಗಳನ್ನು ಹೊರತು ಪಡಿಸಿ, ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಹಾಗೂ ಇತರ ಪ್ರಯಾಣಿಕರ ವಾಹನಗಳ ಸಂಚಾರವನ್ನು ನಿಷೇಧಿಸಿದೆ.
ಆಹಾರ ಸಾಮಗ್ರಿ, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನಿನ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ತೆರೆಯಲು ಅನುಮತಿಸಿದೆ. ಹಾಲಿನ ಬೂತ್ಗಳು ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶವಿದೆ.
ನ್ಯಾಯಬೆಲೆ ಅಂಗಡಿಗಳು ತೆರೆಯಲಿವೆ. ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಿಗ್ಗೆ 6 ರಿಂದ 10 ರ ವರೆಗೆ ತೆರೆಯಲಿವೆ. ಜನರು ಮನೆಯಿಂದ ಹೊರ ಬರುವುದನ್ನು ತಡೆಯುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆ ಒದಗಿಸುವುದನ್ನು ಉತ್ತೇಜಿಸಲಾಗುವುದು.
ದೂರ ಸಂಪರ್ಕ, ಇಂಟರ್ ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವೆಗಳು ಲಭ್ಯವಾಗಲಿವೆ.
ಅಗತ್ಯ ವಸ್ತುಗಳ ತಯಾರಿಕಾ ಘಟಕಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗುವುದು.
ಅಂತ್ಯಸಂಸ್ಕಾರದಲ್ಲಿ ಗರಿಷ್ಠ 5 ಜನರಿಗೆ ಪಾಲುಗೊಳ್ಳಲು ಅವಕಾಶ.
ಮದುವೆ ಸಮಾರಂಭಗಳಲ್ಲಿ ಗರಿಷ್ಠ 40 ಜನರಿಗೆ ಅವಕಾಶ ನೀಡಲಾಗಿದೆ.
ನೋಂದಣಿ ಮೆಸೇಜ್ ಇದ್ದಲ್ಲಿ ಮಾತ್ರ ಲಸಿಕೆ ಕೇಂದ್ರಕ್ಕೆ ಹೋಗಲು ಅವಕಾಶ ನೀಡಲಾಗಿದೆ.