ಬೆಂಗಳೂರು: ಕನಿಷ್ಠ ಮೂಲ ಸೌಕರ್ಯ ಇಲ್ಲದ ನರ್ಸಿಂಗ್ ಕಾಲೇಜುಗಳನ್ನು ಮುಚ್ಚಲು ನಿರ್ದಾಕ್ಷಿಣ್ಯ ಕ್ರಮ ಜರಗಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ನಡೆದ ನರ್ಸಿಂಗ್ ಕಾಲೇಜುಗಳ ಪದಾಧಿಕಾರಿಗಳ ಸಭೆಯಲ್ಲಿ ಸಚಿವರು, ರಾಜ್ಯದಾದ್ಯಂತ ನರ್ಸಿಂಗ್ ಕಾಲೇಜುಗಳ ಮೂಲಸೌಕರ್ಯ ತಪಾಸಣೆ ನಡೆಸಿ ಸಮರ್ಪಕ ಸೌಕರ್ಯಗಳಿಲ್ಲದ ಕಾಲೇಜುಗಳಿಗೆ ಬೀಗ ಹಾಕಿ ಎಂದು ಸೂಚನೆ ನೀಡಿದ್ದಾರೆ.
ಸರ್ಕಾರದಿಂದ ಎಲ್ಲಾ ಸೌಲಭ್ಯ ಪಡೆದು ವಿದ್ಯಾರ್ಥಿಗಳಿಗೆ ಕನಿಷ್ಠ ಸೌಕರ್ಯ ಕಲ್ಪಿಸದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅನೇಕ ನರ್ಸಿಂಗ್ ಕಾಲೇಜುಗಳಲ್ಲಿ ಅಗತ್ಯ ಪ್ರಮಾಣದ ಬೋಧಕರು, ಬೋಧಕೇತರ, ಪ್ರಯೋಗಾಲಯ ಸಿಬ್ಬಂದಿ ಇಲ್ಲ. ಗ್ರಂಥಾಲಯ ಮೊದಲಾದ ಮೂಲ ಸೌಕರ್ಯ ಕೊರತೆ ಇದೆ. ಇಷ್ಟೆಲ್ಲ ಸಮಸ್ಯೆ ಇಟ್ಟುಕೊಂಡು ಕಾಲೇಜುಗಳು ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣ ನೀಡುತ್ತಾರೆ? ಈ ಬಗ್ಗೆ ವ್ಯಾಪಕ ದೂರಗಳು ಬಂದ ಹಿನ್ನೆಲೆಯಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಆಡಳಿತ ಮಂಡಳಿಯವರು ಸಭೆಯಲ್ಲಿ ನರ್ಸಿಂಗ್ ಕೋರ್ಸ್ ಗಳ ಶುಲ್ಕ ಪರಿಷ್ಕರಣೆ ಮಾಡುವಂತೆ ಬೇಡಿಕೆ ಇಟ್ಟಿದ್ದು, ಇದನ್ನು ಸಚಿವರು ತಳ್ಳಿ ಹಾಕಿದ್ದಾರೆ. ಈ ಸಾಲಿಗೆ ಯಾವುದೇ ಕಾರಣಕ್ಕೂ ವಾರ್ಷಿಕ ಶುಲ್ಕ ಪರಿಷ್ಕರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.