ಭುವನೇಶ್ವರ: ಇದು 30 ವರ್ಷಗಳ ಕನಸು ಸಾಕಾರಗೊಂಡ ದಿನ. ಈ ಊರಿನ ಜನರಿಗೆ ರಸ್ತೆ ಸಂಪರ್ಕವಿಲ್ಲದೆ ಪರದಾಡುವಂತಾಗಿತ್ತು. ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೀಗ ಮೂರು ದಶಕಗಳ ಕನಸು ನನಸಾಗಿದ್ದು, ಗ್ರಾಮಸ್ಥರು ಫುಲ್ ಖುಷಿಯಾಗಿದ್ದಾರೆ.
ಒಡಿಶಾದ ನಯಗರ್ಹ್ ಜಿಲ್ಲೆಯ ತುಳುಬಿ ಎಂಬ ಕುಗ್ರಾಮಕ್ಕೆ 30 ವರ್ಷಗಳಿಂದ ರಸ್ತೆ ಸಂಪರ್ಕವಿಲ್ಲದೆ ಜನರು ಕಂಗಾಲಾಗಿದ್ದರು. ಹೀಗಾಗಿ ಈ ಗ್ರಾಮದ ಹರಿಹರ್ ಬೆಹೆರಾ ಹಾಗೂ ಆತನ ಸಹೋದರ ತಾವೇ ಸ್ವತಃ ರಸ್ತೆ ನಿರ್ಮಿಸುವ ಮುಖಾಂತರ ತನ್ನ ಜನರ ಕನಸನ್ನು ಸಾಕಾರಗೊಳಿಸಿದ್ದಾನೆ.
ಇದೀಗ ಅರಣ್ಯ ಪ್ರದೇಶದ ಮುಖಾಂತರ ಸುಮಾರು ಮೂರು ಕಿ.ಮೀ. ಉದ್ದ ರಸ್ತೆ ನಿರ್ಮಿಸಿ ಸಂಪರ್ಕ ಕಲ್ಪಿಸಿದ್ದಾರೆ. 30 ವರ್ಷಗಳ ಹಿಂದೆಯೇ ಇಲ್ಲಿನ ಜನ ಶಾಸಕರಿಗೆ ರಸ್ತೆ ನಿರ್ಮಿಸುವಂತೆ ವಿನಂತಿಸಿದ್ದರು. ಆದರೆ, ಇಲ್ಲಿ ರಸ್ತೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಜನರ ಕೋರಿಕೆಯನ್ನು ತಿರಸ್ಕರಿಸಿದ್ದರು. ಹೀಗಾಗಿ ಅಂದಿನಿಂದಲೇ ರಸ್ತೆ ನಿರ್ಮಿಸುವ ಕಾಮಗಾರಿ ಶುರು ಮಾಡಿದ ಈ ಸಹೋದರರು ಇಂದು ಪೂರ್ಣಗೊಳಿಸುವ ಮುಖಾಂತರ ಹೀರೋಗಳಾಗಿದ್ದಾರೆ.
ಮನೆಗೆ ವಿದ್ಯಾರ್ಥಿನಿ ಕರೆಸಿಕೊಂಡು ಪ್ರಾಧ್ಯಾಪಕನಿಂದ ಅತ್ಯಾಚಾರ
‘’ಇಲ್ಲಿ ರಸ್ತೆ ಇರಲಿಲ್ಲ. ನಾವು ರಸ್ತೆಗೆ ಬೇಡಿಕೆ ಇಟ್ಟಾಗ, ಸ್ಥಳೀಯ ಶಾಸಕರು ನಮಗೆ ಎಂದಿಗೂ ಇಲ್ಲಿ ರಸ್ತೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆ ದಿನದಿಂದ ಬೆಹೆರಾ ರಸ್ತೆ ನಿರ್ಮಿಸಲು ತನ್ನನ್ನು ತಾನು ತೊಡಗಿಸಿಕೊಂಡರು’’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಕಳೆದ 3 ದಶಕಗಳಿಂದ ಬೆಹೆರಾ ಹಾಗೂ ಅವರ ಸಹೋದರ ಮೂರು ಕಿ.ಮೀ. ಉದ್ದದ ರಸ್ತೆಗಾಗಿ ಬೆವರು ಹರಿಸಿದ್ದಾರೆ. ‘’ನಮ್ಮ ಸಂಬಂಧಿಕರು ಗ್ರಾಮಕ್ಕೆ ಬರುವುದು ಕಷ್ಟವಾಗುತ್ತಿತ್ತು. ರಸ್ತೆ ಇಲ್ಲದ್ದರಿಂದ ಅವರು ದಾರಿ ಮರೆತುಬಿಡುತ್ತಿದ್ದರು. ಹೀಗಾಗಿ ನಾನು ಹಾಗೂ ಸಹೋದರ ಸ್ವತಃ ರಸ್ತೆ ನಿರ್ಮಾಣಕ್ಕೆ ಮುಂದಾದೆವು. ಇದೀಗ ರಸ್ತೆ ನಿರ್ಮಾಣವಾಗಿದೆ’’ ಎಂದು ಬೆಹೆರಾ ಹೇಳಿದ್ದಾರೆ.
ಅರಣ್ಯದ ಮೂಲಕ ಹಾದುಹೋಗುವ ಮೂರು ಕಿಲೋಮೀಟರ್ ಉದ್ದದ ರಸ್ತೆ ನಿರ್ಮಿಸಲು ಬೆಹೆರಾ ಸಹೋದರರ 30 ವರ್ಷಗಳ ತ್ಯಾಗದ ಬಳಿಕ ಒಡಿಶಾ ಸರಕಾರ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ.