ಮಧ್ಯಪ್ರದೇಶದ ಶಹಾದೋಲ್ ಜಿಲ್ಲೆಯಲ್ಲಿ 20 ವರ್ಷದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಎರಡು ದಿನಗಳ ಕಾಲ ತೋಟದ ಮನೆಯಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಆಡಳಿತರೂಢ ಬಿಜೆಪಿ ಸ್ಥಳೀಯ ಮುಖಂಡ ಸೇರಿದಂತೆ ನಾಲ್ವರ ವಿರುದ್ದ ಕೇಸು ದಾಖಲಾಗಿದೆ. ಫೆಬ್ರವರಿ 18 ರಂದು ದಿನಸಿ ತರಲು ಹೋಗಿದ್ದ ಯುವತಿಯನ್ನು ಅಪಹರಿಸಲಾಗಿದೆ. ಜೈತ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಡಘಾಟ್ ಪ್ರದೇಶದ ತೋಟದ ಮನೆಯೊಂದರಲ್ಲಿ ಆಕೆಯನ್ನು ಕೂಡಿಹಾಕಿದ್ದ ದುಷ್ಕರ್ಮಿಗಳು ಬಲವಂತವಾಗಿ ಮದ್ಯಪಾನ ಮಾಡಿಸಿ ಫೆಬ್ರವರಿ 18, 19 ರಂದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಶಹಾದೋಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ವೈಸ್ ತಿಳಿಸಿದ್ದಾರೆ.
ಫೆಬ್ರವರಿ 20 ರಂದು ಆರೋಪಿಗಳು ಆಕೆಯನ್ನು ಮನೆಯ ಮುಂದೆ ಎಸೆದು ಪರಾರಿಯಾಗಿದ್ದಾರೆ. ಭಾನುವಾರ ಪ್ರಕರಣ ದಾಖಲಾಗಿದ್ದು, ಜೈತ್ಪುರ್ ಆರೋಗ್ಯ ಕೇಂದ್ರಕ್ಕೆ ಯುವತಿಯನ್ನು ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೈತ್ಪುರ್ ಮಂಡಲ ಬಿಜೆಪಿ ಅಧ್ಯಕ್ಷ ಹಾಗೂ ಆತನ ಸಹಚರರು ಸಾಮೂಹಿಕ ಅತ್ಯಾಚಾರ, ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದು, ಆತನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.