
ಹುಬ್ಬಳ್ಳಿ: ಸಾಲ ಕೊಟ್ಟವನ ಕಿರುಕುಳದಿಂದ ಬೇಸತ್ತು ಲಾರಿಗೆ ಸಿಲುಕಿ ಸಾಲಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಸಿದ್ದು ಕೆಂಚಣ್ಣನವರ(43) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.
ಮಹೇಶ ಚಿಕ್ಕವೀರಮಠ ಅವರ ಬಳಿ ಸಿದ್ದು 10 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. 10 ಲಕ್ಷ ರೂಪಾಯಿಗೆ 65 ಲಕ್ಷ ರೂಪಾಯಿ ಬಡ್ಡಿ ನೀಡಿದ್ದರು. ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿಮ್ಸ್ ಆಸ್ಪತ್ರೆ ಶವಗಾರದಲ್ಲಿ ಸಿದ್ದು ಕೆಂಚಣ್ಣನವರ ಮೃತ ದೇಹ ಇರಿಸಲಾಗಿದೆ. ಶವಾಗಾರದ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬಡ್ಡಿ ದಂಧೆಕೋರ ಮಹೇಶನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಠಾಣೆಗೆ ಹುಬ್ಬಳ್ಳಿ -ಧಾರವಾಡ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ. ಅವರ ಮುಂದೆ ಸಿದ್ದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ. ಇದು ಆತ್ಮಹತ್ಯೆಯಲ್ಲ, ಯಾರು ಏನೋ ಮಾಡಿದ್ದಾರೆ ಎಂದು ಆತ್ಮಹತ್ಯೆಗೆ ಶರಣದ ಸಿದ್ದು ಕೆಂಚಣ್ಣನವರ ಪತ್ನಿ ಅಶ್ವಿನಿ ಆರೋಪಿಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.