alex Certify ರೈತರು ಸೇರಿ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರು ಸೇರಿ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022-23 ನೇ ಸಾಲಿನಲ್ಲಿ ಒದಗಿಸಿದ ಪೂರಕ ಆಯವ್ಯಯದ ಅನುದಾನದಲ್ಲಿ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ ಮತ್ತು ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿ ಹಿಂದುಳಿದ ವರ್ಗಗಳ ಈ ಯೋಜನೆಯ ಸೌಲಭ್ಯ ಪಡೆಯಲು ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು 2 ಲಕ್ಷ ರೂ.ವರೆಗೆ ಆರ್ಥಿಕ ನೆರವು ಇದರಲ್ಲಿ ಗರಿಷ್ಠ ಶೇ.15 ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ.4 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.(ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯಿತ, ಕಾಡುಗೊಳ್ಳ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ) ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98 ಸಾವಿರ ರೂ., ಪಟ್ಟಣ ಪ್ರದೇಶದವರಿಗೆ 1,20,000 ರೂ. ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಈ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾಸಿಂಧು ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್‍ನಲ್ಲಿರುವಂತೆ ಅರ್ಜಿದಾರರ ಹೆಸರು(ಶ್ರೀ/ಶ್ರೀಮತಿ,ಕುಮಾರಿ ಮುಂತಾದ ಮಾಹಿತಿಗಳೆಲ್ಲವೂ) ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಇದ್ದು, ಹೊಂದಾಣಿಕೆಯಾಗಬೇಕು.

ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಅರ್ಹತೆ ಹೊಂದಿರಬೇಕು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಒಳಪಡುವ ಜಾತಿ/ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು, ಹಾಲಿ ಜಮೀನುಗಳು ಖುಷ್ಕಿಯಾಗಿದ್ದು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು. ಅರ್ಜಿದಾರರ ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98 ಸಾವಿರ ಹಾಗೂ ಪಟ್ಟಣ ಪ್ರದೇಶದವರಿಗೆ 1.20 ಲಕ್ಷ ರೂ ಗಳ ಒಳಗಿರಬೇಕು. ಅರ್ಜಿದಾರರು ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 01 ಎಕರೆ ಜಮೀನು ಹೊಂದಿರಬೇಕು. ವೈಯುಕ್ತಿಕ ಕೊಳವೆ ಬಾವಿ ಯೋಜನೆಯಲ್ಲಿ ಘಟಕ ವೆಚ್ಚ 2.50 ಲಕ್ಷ ರೂ. ಇದರಲ್ಲಿ 2 ಲಕ್ಷ ರೂ. ಸಹಾಯಧನ ಹಾಗೂ 50 ಸಾವಿರ ನಿಗಮದಿಂದ ಶೇ.4ರ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತ ಒಳಗೊಂಡಿದೆ.

ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್‍ನಲ್ಲಿರುವಂತೆ ರೈತರ ಹೆಸರು(ಶ್ರೀ/ಶ್ರೀಮತಿ, ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಬ್ಯಾಂಕ್ ಖಾತೆಯ ಪುಸ್ತಕದಲ್ಲಿಯೂ ಆಧಾರ್ ಕಾರ್ಡ್‍ನಲ್ಲಿರುವಂತೆ ಹೆಸರು ಹೊಂದಾಣಿಕೆಯಾಗಬೇಕು. ಈ ಹಿಂದೆ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂದು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿಸಲ್ಲಿಸಲು ಅರ್ಹರಿರುವುದಿಲ್ಲ. ಈಗಾಗಲೇ 2022-23 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರು ಪುನ: ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ಅರ್ಜಿದಾರರು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್,  ಬೆಂಗಳೂರು ಒನ್  ಮತ್ತು  ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ, 17 ಕೊನೆಯ ದಿನವಾಗಿದೆ. ಹಾಗೂ ನಿಗಮದ ವೆಬ್‍ಸೈಟ್ https://www.dbcdc.karnataka.gov.in ಅಥವಾ ನಿಗಮದ ಕೇಂದ್ರ ಕಚೇರಿ ದೂರವಾಣಿ, ಸಹಾಯವಾಣಿ ಸಂಖ್ಯೆ: 080-22374832 ಮತ್ತು 8050770004 ಮತ್ತು 67090400100, 7090400900 ಅಥವಾ ಕಚೇರಿ ವೇಳೆಯಲ್ಲಿ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು  ಹಿಂದುಳಿದ  ವರ್ಗಗಳ  ಅಭಿವೃದ್ಧಿ  ನಿಗಮ,  ಮಡಿಕೇರಿ  ದೂರವಾಣಿ ಸಂಖ್ಯೆ: 08272-221656 ನ್ನು ಸಂಪರ್ಕಿಸಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕೊಡಗು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...