ಬೆಂಗಳೂರು: ಬಲವಂತವಾಗಿ ಸಾಲ ವಸೂಲಿ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಮೀಟರ್ ಬಡ್ಡಿ ದಂಧೆಕೋರರಿಗೆ ಮೂಗುದಾರ ಹಾಕಲು ಕಾಯ್ದೆ ತಿದ್ದುಪಡಿಗೆ ಸಂಪುಟ ಸಭೆ ಸಮ್ಮತಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಅನುಮೋದನೆ ನೀಡಲಾಗಿದೆ. ಈ ಮೂಲಕ ಹೆಚ್ಚಿನ ಬಡ್ಡಿ ಕೊಡುವಂತೆ ಕಿರುಕುಳ ನೀಡಿ ಬಲವಂತದಿಂದ ಸಾಲ ವಸೂಲಿ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ.
ಮೀಟರ್ ಬಡ್ಡಿ ವಿಧಿಸಿ ಬಲವಂತದಿಂದ ಸಾಲ ವಸೂಲಿ ಮಾಡುವ ಲೇವಾದೇವಿಗಾರರಿಗೆ ಬಿಸಿ ಮುಟ್ಟಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಬಲವಂತವಾಗಿ ಸಾಲ ಮತ್ತು ಬಡ್ಡಿ ವಸೂಲಿ ಮಾಡಿದರೆ ವಿಧಿಸುತ್ತಿದ್ದ ಶಿಕ್ಷೆಯನ್ನು ಆರು ತಿಂಗಳಿನಿಂದ ಒಂದು ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಎರಡನೇ ಅಪರಾಧಕ್ಕೆ ಎರಡು ವರ್ಷ ಶಿಕ್ಷೆ ನಿಗದಿಪಡಿಸಲಾಗಿದೆ. ಅಲ್ಲದೆ 5000 ರೂಪಾಯಿ ದಂಡವನ್ನು 50 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.