ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಮತದಾರರ ಓಲೈಕೆಗೆ ಭರವಸೆಗಳ ಮೇಲೆ ಭರವಸೆ ನೀಡತೊಡಗಿದೆ.
ಈಗಾಗಲೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಮಾಸಿಕ 2,000 ರೂ., ಬಿಪಿಎಲ್ ಕುಟುಂಬಕ್ಕೆ ತಿಂಗಳಿಗೆ 10 ಕೆಜಿ ಅಕ್ಕಿ ವಿತರಿಸುತಾಗಿ ಘೋಷಣೆ ಮಾಡಿರುವ ಕಾಂಗ್ರೆಸ್, ಈಗ ಸ್ತ್ರೀಶಕ್ತಿ ಸಂಘಗಳ ಮಹಿಳೆಯರ ಸಾಲ ಮನ್ನಾ ಮಾಡುವುದಾಗಿ ಹೇಳಿದೆ.
ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವ ಜೊತೆಗೆ ರೈತರು ಮತ್ತು ಸ್ತ್ರೀಶಕ್ತಿ ಸಾಲದ ಮೊತ್ತವನ್ನು ಹೆಚ್ಚಳ ಮಾಡಲಾಗುವುದು. ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲವನ್ನು ಮೂರರಿಂದ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು. ರೈತರಿಗೆ ಶೇಕಡ ಮೂರರ ಬಡ್ಡಿ ದರದ ಸಾಲವನ್ನು 5 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ.
‘ಪ್ರಜಾ ಧ್ವನಿ’ ಬಸ್ ಯಾತ್ರೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ನಡೆಸಿದ ಕಾಂಗ್ರೆಸ್ ನಾಯಕರು, ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಜೆಟ್ ನಲ್ಲಿ 10,000 ಕೋಟಿ ರೂ. ಮೀಸಲಿಡುವುದಾಗಿ ವಾಗ್ದಾನ ಮಾಡಿದ್ದಾರೆ.