ಬೆಂಗಳೂರು: ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಆರಂಭವಾಗಿದ್ದು, ಜನರು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ವಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿ ಕಾರಿದ್ದರೂ ಮೌನವಾಗಿದ್ದ ಸಿಎಂ ಸಿದ್ದರಾಮಯ್ಯ ಈಗ ವಿದ್ಯುತ್ ಅಭಾವದ ಬಗ್ಗೆ ಮಾತನಾಡಿದ್ದಾರೆ.
ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಮಸ್ಯೆಯಾಗಿದೆ. ಬೇಡಿಕೆ ಹೆಚ್ಚಾಗಿದೆ. ಹೊರ ರಾಜ್ಯದಿಂದ ವಿದ್ಯುತ್ ಖರೀದಿಸುವ ಬಗ್ಗೆ ಸಭೆ ಕರೆದಿದ್ದೇವೆ. ವಿದ್ಯುತ್ ಉತ್ಪಾದಿಸುವವರು ಸರ್ಕಾರಕ್ಕೆ ನೀಡುವಂತೆ ಆದೇಶಿಸಿದ್ದೇವೆ ಎಂದರು.
ಬರಗಾಲವಿರುವುದರಿಂದ 7 ಗಂಟೆಗಳ ಕಾಲ ವಿದ್ಯುತ್ ನೀಡಲು ಆಗುತ್ತಿಲ್ಲ. ಆದರೂ ವಿದ್ಯುತ್ ಕೊಡುತ್ತಿದ್ದೇವೆ. ಕಳೆದ ವರ್ಷ 900-1000 ಮೆಗಾವ್ಯಾಟ್ ವಿದ್ಯುತ್ ಬಳಕೆ ಆಗುತ್ತಿತ್ತು. ಈ ಬಾರಿ 1500-1600 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ ಎಂದು ಹೇಳಿದರು.
ಬಿಜೆಪಿಯವರ ರಾಜಕೀಯ ಮಾತುಗಳಿಗೆ ನಾನು ಉತ್ತರಿಸಲ್ಲ. ಅವರು ರಾಜಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.