ನವದೆಹಲಿ: ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ನಿಂದಾಗಿ ಜನರು, ರೈತರು ಸಂಕಷ್ಟಕ್ಕೀಡಾಗಿದ್ದು, ವಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಕರ್ನಾಟಕವನ್ನು ಕತ್ತಲೆಗೆ ತಳ್ಳಿ ಇಂಧನ ಸಚಿವರು ಕಾಣೆಯಾಗಿದ್ದಾರೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಹುಡುಕಿ ಕೊಟ್ಟವರಿಗೆ ಸಿಂಗಲ್ ಫೇಸ್ ವಿದ್ಯುತ್ ಉಚಿತ, ಖಚಿತ ಎಂದು ರಾಜ್ಯ ಬಿಜೆಪಿ ಟ್ವೀಟ್ ಸಮರ ನಡೆಸಿತ್ತು. ಬಿಜೆಪಿ ನಾಯಕರ ವಾಗ್ದಾಳಿಗೆ ತಿರಿಗೇಟು ನೀಡಿರುವ ಸಚಿವ ಕೆ.ಜೆ.ಜಾರ್ಜ್, ಬಿಜೆಪಿ ಆಡಳಿತದಲ್ಲಿ ಇಂಧನ ಇಲಾಖೆಯಲ್ಲಿ ಯಾವುದೆ ಕೆಲಸವಾಗಿಲ್ಲ. ಬಿಜೆಪಿಯ ವೈಫಲ್ಯದಿಂದಾಗಿ ಈಗ ನಮಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಹೆಚ್ಚಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಈ ಹಿಂದೆ ಕೂಡಗಿಯಿಂದ 250 ಮೆಗಾ ವ್ಯಾಟ್ ವಿದ್ಯುತ್ ತೆಗೆದುಕೊಳ್ಳದೇ ದೆಹಲಿಯವರಿಗೆ ಬಿಟ್ಟುಕೊಟ್ಟಿದ್ದಾರೆ. ನಾವು ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಸ್ವಲ್ಪ ದಿನಗಳಲ್ಲಿಯೇ ಎಲ್ಲವೂ ಸರಿ ಹೋಗಲಿದೆ ಎಂದಿದ್ದಾರೆ.
ನಾನು ನಾಪತ್ತೆಯಾಗಿಲ್ಲ. ಕರ್ನಾಟಕವನ್ನು ಕತ್ತೆಗೂ ತಳ್ಳಿಲ್ಲ. ಬಿಜೆಪಿಯಿಂದಾಗಿ ಕತ್ತಲೆಯಲ್ಲಿದ್ದ ರಾಜ್ಯವನ್ನು ಬೆಳಕಿಗೆ ತಂದಿದ್ದೇವೆ. ಬಿಜೆಪಿ ಕತ್ತಲೆಯಲ್ಲಿಟ್ಟಿದ್ದರು. ಅದಕ್ಕೆ ಜನ ಅವರಿಗೆ ಬುದ್ಧಿ ಕಲಿಸಿದ್ದರೆ. ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿರುವ ಬಿಜೆಪಿಯವರು ಏನಾದರೂ ಆರೋಪಿಸಬೇಕು ಎಂದು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.