ದೆಹಲಿಯ LNJP ಆಸ್ಪತ್ರೆಯು ಅಮಾನವೀಯ ವರ್ತನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬದುಕಿದ್ದಾಗಲೇ ನವಜಾತ ಶಿಶು ಸಾವನ್ನಪ್ಪಿದೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿ ಅದನ್ನು ಪೋಷಕರಿಗೆ ಹಿಂತಿರುಗಿಸಿದ್ದಾರೆ.
ಮನೆಗೆ ತಲುಪಿದಾಗ ಶಿಶು ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಗುವನ್ನು ಕರೆದುಕೊಂಡು ಮತ್ತೆ ಆಸ್ಪತ್ರೆಗೆ ಬಂದರೂ ವೈದ್ಯರು ಶಿಶುವನ್ನು ಚೆಕಪ್ ಮಾಡಲು ನಿರಾಕರಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೆರಿಗೆ ಬಳಿಕ ಜನಿಸಿದ ಹೆಣ್ಣುಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿಬಿಟ್ಟಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ಮಗುವನ್ನು ಪೆಟ್ಟಿಗೆಯೊಂದರಲ್ಲಿ ಲಾಕ್ ಮಾಡಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಮಗು ಪೆಟ್ಟಿಗೆಯಲ್ಲೇ ಇತ್ತು. ಮನೆಗೆ ಬಂದು ಪೆಟ್ಟಿಗೆ ತೆರೆದಾಗ ಮಗು ಉಸಿರಾಡುತ್ತಿರುವುದು ಬೆಳಕಿಗೆ ಬಂದಿದೆ. ಜೀವಂತವಾಗಿದ್ದ ಮಗುವನ್ನು ಸತ್ತಿದೆ ಎಂದು ಘೋಷಿಸಿದ್ದಲ್ಲದೆ ಪೆಟ್ಟಿಗೆಯಲ್ಲಿ ತುಂಬಿಸಿರೋದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಟೆಗಟ್ಟಲೆ ಪೆಟ್ಟಿಗೆಯಲ್ಲಿ ಬಂಧಿಯಾಗಿದ್ದಿದ್ದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪುವ ಸಾಧ್ಯತೆಯೂ ಇತ್ತು. ಮಗುವಿನ ಆಯಸ್ಸು ಗಟ್ಟಿಯಾಗಿದ್ದಿದ್ದರಿಂದ ಇಷ್ಟೆಲ್ಲಾ ಅವಾಂತರಗಳ ಬಳಿಕವೂ ಜೀವಂತವಾಗಿದೆ. ಮಗು ಪೆಟ್ಟಿಗೆಯಲ್ಲಿ ಉಸಿರಾಡುತ್ತಿರುವ ದೃಶ್ಯವನ್ನೆಲ್ಲ ಸಂಬಂಧಿಕರು ವಿಡಿಯೋ ಕೂಡ ಮಾಡಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ಮಗುವಿನ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಶು ಬದುಕಿದೆ ಅನ್ನೋದನ್ನು ತಿಳಿದ ಮೇಲೂ ವೈದ್ಯರು ಅದಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿರೋದು ಎಲ್ಎಲ್ಜೆಪಿ ಆಸ್ಪತ್ರೆಯ ಮುಖವಾಡವನ್ನು ಬಯಲು ಮಾಡಿದೆ. ಈ ಘಟನೆ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.
https://youtu.be/HSiHpVKSRGw