
ಪೊಲೀಸ್ ಇನ್ಸ್ಪೆಕ್ಟರ್ ಓರ್ವರ ಪುತ್ರ ವ್ಯಕ್ತಿಯೊಬ್ಬನನ್ನು ಕ್ರಿಕೆಟ್ ಬ್ಯಾಟ್ ನಿಂದ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ಆಘಾತಕಾರಿ ಕೃತ್ಯ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜೈಪುರದ ರಜನಿ ವಿಹಾರ್ ಕಾಲೋನಿಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಪುತ್ರ ಕ್ಷಿತಿಜ್, ಮೋಹನ್ ಎಂಬಾತನನ್ನು ಹತ್ಯೆ ಮಾಡಿದ್ದಾನೆ. ಆಘಾತಕಾರಿ ಸಂಗತಿ ಎಂದರೆ ತಮ್ಮ ಪುತ್ರ ಈ ಕೃತ್ಯ ಎಸಗುವಾಗ ಆತನ ಇನ್ಸ್ಪೆಕ್ಟರ್ ತಂದೆ ಸ್ಥಳದಲ್ಲಿಯೇ ಇದ್ದು ವೀಕ್ಷಿಸುತ್ತಿದ್ದರು ಎಂದು ಹೇಳಲಾಗಿದೆ.
ಇನ್ಸ್ಪೆಕ್ಟರ್ ಮನೆ ಇರುವ ಸಮೀಪದಲ್ಲೇ ಮೋಹನ್ ಅಂಗಡಿ ಹೊಂದಿದ್ದು ಈ ಕಾರಣಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಮಂಗಳವಾರ ಸಂಜೆ ಇದು ವಿಕೋಪಕ್ಕೆ ತಿರುಗಿದ್ದು, ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಬಂದ ಕ್ಷಿತಿಜ್, ಮೋಹನನನ್ನು ಮನಬಂದಂತೆ ಥಳಿಸಿದ್ದಾನೆ.
ಇದರ ಪರಿಣಾಮ ಆತ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದು, ಬಳಿಕ ಕ್ಷಿತಿಜ್ ಹಾಗೂ ಆತನ ತಂದೆ ಮೋಹನ್ ದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಕ್ಷಿತಿಜನನ್ನು ಬಂಧಿಸಿರುವ ಪೊಲೀಸರು ಮೋಹನ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆಯಲ್ಲಿ ಇನ್ಸ್ಪೆಕ್ಟರ್ ಪಾತ್ರದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
https://twitter.com/SachinGuptaUP/status/1775718872458338371?ref_src=twsrc%5Etfw%7Ctwcamp%5Etweetembed%7Ctwterm%5E1775718872458338371%7Ctwgr%5E3b6230695710888045f6328127fb7f578c1b7907%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Flivemurdercaughtoncamerainjaipurpoliceinspectorssonbeatsmantodeathwithcricketbatinbroaddaylightdisturbingvideosurfaces-newsid-n597296118