ನವದೆಹಲಿ: ಲಿವ್ ಇನ್ ರಿಲೇಷನ್ ಶಿಪ್ ಗಳಿಂದ ಅಪರಾಧ ಕೃತ್ಯಗಳು ಹೆಚ್ಚಾಗ್ತಿವೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಆರೋಪಿಸಿದ್ದಾರೆ.
ಲಿವಿಂಗ್ ರಿಲೇಷನ್ ಶಿಪ್ ಸಂಪೂರ್ಣ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ದುರಂತಗಳಿಗೆ ಹುಡುಗಿಯರೇ ಸಂಪೂರ್ಣ ಹೊಣೆ. ಪೋಷಕರ ಬಿಟ್ಟು ಹೋಗುವ ಹುಡುಗಿಯರೇ ಇದಕ್ಕೆ ಹೊಣೆಗಾರರು. ಲಿವ್ ಇನ್ ರಿಲೇಷನ್ ಶಿಪ್ ಬಗ್ಗೆ ಕೋರ್ಟ್ ನಲ್ಲಿ ನೋಂದಣಿಯಾಗಬೇಕು ಎಂದು ಅವರು ಹೇಳಿದ್ದಾರೆ. ಸಚಿವ ಕೌಶಲ್ ಹೇಳಿಕೆಗೆ ಮಹಿಳೆಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
‘ಲಿವ್-ಇನ್ ಸಂಬಂಧಗಳು ಅಪರಾಧಕ್ಕೆ ಉತ್ತೇಜನ’ ನೀಡುತ್ತವೆ ಎಂದು ಸಚಿವ ಕೌಶಲ್ ಕಿಶೋರ್ ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಲೈವ್-ಇನ್ ಪಾಲುದಾರ ಅಫ್ತಾಬ್ ಅಮೀನ್ ಪೂನಾವಾಲಾ ನಿಂದ 35 ತುಂಡುಗಳಾಗಿ ಕತ್ತರಿಸಲ್ಪಟ್ಟು ಬರ್ಬರವಾಗಿ ಹತ್ಯೆಯಾದ ಶ್ರದ್ಧಾ ಪ್ರಕರಣದ ಬಗ್ಗೆ ಹೇಳಿಕೆ ನೀಡುವಾಗ ಸಚಿವರು ಅತಿರೇಕರ ಪ್ರತಿಕ್ರಿಯೆ ನೀಡಿದ್ದಾರೆ.
ಲಿವ್ ಇನ್ ರಿಲೇಶನ್ ಶಿಪ್ ಗಾಗಿ ಹೆತ್ತವರನ್ನು ಬಿಟ್ಟು ಹೋಗುವುದಕ್ಕೆ ಹೆಣ್ಣು ಮಕ್ಕಳೇ ಕಾರಣ. ಲಿವ್-ಇನ್ ಸಂಬಂಧದಲ್ಲಿ ಉಳಿಯಲು ಸರಿಯಾದ ನೋಂದಣಿ ಇರಬೇಕು. ಸಂಗಾತಿಯ ಆಯ್ಕೆಯಲ್ಲಿ ಪೋಷಕರಿಗೆ ಸಂತೋಷವಿಲ್ಲದಿದ್ದರೆ, ಹುಡುಗಿಯರು ಮೊದಲು ನ್ಯಾಯಾಲಯಕ್ಕೆ ಹೋಗಿ ಮದುವೆಯಾಗಬೇಕು ಮತ್ತು ನಂತರ ಒಟ್ಟಿಗೆ ಇರುತ್ತಾರೆ ಎಂದು ಹೇಳಿದ್ದಾರೆ.
ಇಂತಹ ಘಟನೆಗಳು ಹೆಚ್ಚಾಗಿ ಶಿಕ್ಷಿತ ಹುಡುಗಿಯರಲ್ಲಿ ನಡೆಯುತ್ತಿವೆ. ಅವರು ತಮ್ಮನ್ನು ವಯಸ್ಕರು. ತಿಳಿದುಕೊಂಡವರು, ಅಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ದೊಡ್ಡವರು ಎಂದು ಭಾವಿಸಿರುತ್ತಾರೆ ಎಂದರು.
ಲಿವ್-ಇನ್ ಸಂಬಂಧವು ತಪ್ಪು. ಇದು ಅಪರಾಧಕ್ಕೆ ಕಾರಣವಾಗುತ್ತದೆ. ಇದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕಿಶೋರ್ ಹೇಳಿದರು.
ದೇಶದಲ್ಲಿ ಲಿವ್-ಇನ್ ಸಂಬಂಧಗಳು ಈಗಾಗಲೇ ಕಾನೂನುಬದ್ಧವಾಗಿವೆ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ವರ್ಷಗಳ ಹಿಂದೆ ತೀರ್ಪು ನೀಡಿದ್ದರೂ ಸಹ ಕೇಂದ್ರ ಸಚಿವರ ಇಂತಹ ಪ್ರತಿಕ್ರಿಯೆ ಬಂದಿದೆ.
ಹಳ್ಳಿಗಳ ಹೆಣ್ಣುಮಕ್ಕಳು ಇಂತಹ ಬಲೆಗೆ ಬೀಳುವುದಿಲ್ಲ. ಇಂತಹ ಅಪರಾಧಗಳಿಗೆ ಬಲಿಯಾಗುವುದು ಶಿಕ್ಷಣ ಪಡೆದ ಹೆಣ್ಣುಮಕ್ಕಳು ಎಂದು ಹೇಳಿದ ಬಿಜೆಪಿ ಸಚಿವರು, ಅಫ್ತಾಬ್ ಪೂನಾವಾಲಾಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಚಿವ ಕೌಶಲ್ ಕಿಶೋರ್ ನೀಡಿರುವ ಹೇಳಿಕೆ ಆಘಾತಕಾರಿ, ದಿಗಿಲು ಹುಟ್ಟಿಸುವಂತಿದೆ, ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೋರಾಟಗಾರ್ತಿ ಬೃಂದಾ ಅಡಿಗೆ ಹೇಳಿದ್ದಾರೆ.
ಕಿಶೋರ್ ಅವರನ್ನು ತರಾಟೆಗೆ ತೆಗೆದುಕೊಂಡ ಅಡಿಗೆ, ಸಚಿವರು ಮಹಿಳೆಯರನ್ನು ದೂಷಿಸುತ್ತಲೇ ಇದ್ದಾರೆ. ಇದೇನು ಪುರುಷಪ್ರಧಾನ, ಸ್ತ್ರೀದ್ವೇಷ, ಲಿಂಗಭೇದ ನೀತಿ? ಈ ವ್ಯಕ್ತಿ ಸಚಿವ ಸ್ಥಾನದಲ್ಲಿರಲು ‘ಅನರ್ಹ’ ಎಂಬ ಕಾರಣದಿಂದ ಕೆಳಗಿಳಿಯಬೇಕು. ಬಿಜೆಪಿ ನಾಯಕತ್ವವು ಅವರಿಗೆ ಶಿಕ್ಷಣ ಮತ್ತು ತರಬೇತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಅವರು ಕ್ಷಮೆಯಾಚಿಸಬೇಕು. ಸಂತ್ರಸ್ತೆಯ ಕುಟುಂಬವು ಈಗಾಗಲೇ ಸಾಕಷ್ಟು ಆಘಾತ ಮತ್ತು ದುಃಖವನ್ನು ಅನುಭವಿಸುತ್ತಿದೆ. ಸಚಿವರಿಗೆ ಹಾಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದ್ದಾರೆ.