ಪ್ರಯಾಗ್ ರಾಜ್: ಗಂಡನ ಕಿರುಕುಳದಿಂದ ಬೇಸತ್ತು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಮಹಿಳೆ ಬಳಿಕ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾಳೆ.
ಗಂಡ ಹೊಡೆಯುತ್ತಾನೆ ಎನ್ನುವ ಕಾರಣಕ್ಕೆ ಪ್ರಿಯಕರನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದೇನೆ. ಅಲ್ಲಿಯೂ ಪತಿ ಬಂದು ಹಲ್ಲೆ ಮಾಡಿದ್ದು, ನಮಗೆ ತೊಂದರೆಯಾಗಿದೆ. ರಕ್ಷಣೆ ನೀಡಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಮಹಿಳೆ ಹೈಕೋರ್ಟ್ ಗೆ ಮನವಿ ಮಾಡಿದ್ದಾಳೆ. ಆದರೆ, ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ, ಕೋರ್ಟ್ ಸಮಯವನ್ನು ಹಾಳು ಮಾಡಿದ ಕಾರಣಕ್ಕೆ ಮಹಿಳೆ ಮತ್ತು ಪ್ರಿಯಕರನಿಗೆ 5000 ರೂಪಾಯಿ ದಂಡ ವಿಧಿಸಿದ್ದಾರೆ.
ಹಿಂದೂ ವಿವಾಹ ಕಾಯ್ದೆಯಡಿ ಈಗಾಗಲೇ ಮದುವೆಯಾದ ನಾಗರಿಕರು ಅಕ್ರಮ ಸಂಬಂಧಕ್ಕಾಗಿ ಈ ನ್ಯಾಯಾಲಯದ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ಲೈವ್ ಇನ್ ಸಂಬಂಧಗಳು ಮಾನ್ಯತೆಯಲ್ಲಿರಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಹಿಂದೂ ವಿವಾಹ ಕಾಯ್ದೆಯ ಅನ್ವಯ ಡೈವೋರ್ಸ್ ನೀಡದೆ ಮಹಿಳೆ ಗಂಡನಿಂದ ಬೇರೆಯಾಗಿ ಮತ್ತೊಬ್ಬನೊಂದಿಗೆ ಹೋದರೆ ಅದು ಅಕ್ರಮ ಸಂಬಂಧವೆನಿಸುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಗೆ ನೆರವಾದರೆ ಅಕ್ರಮ ಸಂಬಂಧದ ಪರವಾಗಿ ತೀರ್ಪು ನೀಡಿದಂತಾಗುತ್ತದೆ. ಅಕ್ರಮ ಸಂಬಂಧವನ್ನು ಒಪ್ಪಿಕೊಳ್ಳುವುದು ಸರಿಯಲ್ಲವೆಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರಿಯಕರನ ಮನೆಗೆ ಬಂದು ಪತಿ ಹಲ್ಲೆ ಮಾಡಿರುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಮಹಿಳೆಗೆ ಕೋರ್ಟ್ ಸೂಚನೆ ನೀಡಿದೆ. ಅಕ್ರಮ ಸಂಬಂಧದ ಪರವಾಗಿ ತೀರ್ಪು ನೀಡುವುದು, ಆದೇಶ ಹೊರಡಿಸುವುದಿಲ್ಲ ಎಂದು ಹೇಳಲಾಗಿದೆ.