ಕಾಬೂಲ್: ಆಫ್ಘಾನಿಸ್ಥಾನ ವಿಮಾನ ನಿಲ್ದಾಣದ ಗೇಟ್ ಬಳಿ ಸ್ಫೋಟ ಸಂಭವಿಸಿದ್ದು, ಮೊದಲು ಇಟಲಿ ವಿಮಾನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ನಂತರ ಉಗ್ರರು ಆತ್ಮಾಹುತಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಕಾಬೂಲ್ ವಿಮಾನ ನಿಲ್ದಾಣದ ಬಳಿ ಭಾರಿ ಸ್ಪೋಟ ಸಂಭವಿಸಿದ್ದು, ಸ್ಫೋಟದ ವೇಳೆ ಸಾವಿರಾರು ಜನರಿದ್ದ ಬಗ್ಗೆ ಮಾಹಿತಿ ಗೊತ್ತಾಗಿದೆ. ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರೊಂದಿಗೆ ಕಾಬುಲ್ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ದಾಳಿ ನಡೆದ ಬಗ್ಗೆ ವರದಿಯಾಗಿದೆ.
ಇದುವರೆಗೆ 13 ಜನರು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ 15 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಇವರಲ್ಲಿ ಮೂವರು ಅಮೆರಿಕ ಯೋಧರು ಕೂಡ ಸೇರಿದ್ದಾರೆ.
ಕಾಬೂಲ್ ನ ಬ್ಯಾರನ್ ಹೋಟೆಲ್ ಬಳಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ಬ್ರಿಟನ್ ಮತ್ತು ಅಮೆರಿಕದ ಯೋಧರು ತಂಗಿದ್ದ ಹೋಟೆಲ್ ಬಳಿ ಬಾಂಬ್ ಸ್ಫೋಟ ಉಂಟಾಗಿದೆ.
ಆಫ್ಘಾನಿಸ್ಥಾನ ತಾಲಿಬಾನ್ ವಶಕ್ಕೆ ಬಂದ ನಂತರ ಸಾವಿರಾರು ಆಫ್ಘನ್ನರು ದೇಶದಿಂದ ಪಲಾಯನ ಮಾಡಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾದಿದ್ದಾರೆ. ಅಮೆರಿಕ ಮತ್ತು ಮಿತ್ರ ಪಡೆಯ ಸೈನಿಕರು, ವಿವಿಧ ದೇಶಗಳ ಸಾವಿರಾರು ನಾಗರಿಕರೊಂದಿಗೆ ಆಫ್ಘನ್ ಜನತೆ ಕೂಡ ದೇಶ ತೊರೆಯಲು ಕಾಬೂಲ್ ವಿಮಾನ ನಿಲ್ದಾಣದ ಬಳಿ ಬೀಡು ಬಿಟ್ಟಿದ್ದಾರೆ. ತಾಲಿಬಾನ್ ಉಗ್ರರು ಆಫ್ಘನ್ನರು ದೇಶ ಬಿಟ್ಟು ಹೋಗದಂತೆ ತಡೆಯೊಡ್ಡಿದ್ದಾರೆ. ಅಲ್ಲದೇ ಅಮೆರಿಕ ಮತ್ತು ಮಿತ್ರಪಡೆಗಳು ಆಗಸ್ಟ್ 31 ರೊಳಗೆ ದೇಶ ಬಿಡುವಂತೆ ತಾಕೀತು ಮಾಡಿದ್ದಾರೆ.