ಬೆಂಗಳೂರು: ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಘಟನೆಯ ಸಂದರ್ಭದಲ್ಲಿ ಅನೇಕ ನೋಡುಗರಿದ್ದರೂ ಯಾರೂ ಏನನ್ನೂ ಮಾಡಲಿಲ್ಲ. ಇಂತಹ ಸಾಮೂಹಿಕ ಹೇಡಿತನವನ್ನು ದೂರ ಮಾಡಬೇಕು ಎಂದು ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಹೈಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಾಧೀಶರು ಪ್ರಸ್ತುತ ಯುಗವನ್ನು “ದುರ್ಯೋಧನರು ಮತ್ತು ದುಶ್ಶಾಸನರ ಯುಗ” ಎಂದು ಉಲ್ಲೇಖಿಸಿದ್ದಾರೆ. ಇಂತಹ ಘಟನೆಗಳು ನಡೆದಾಗ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಸಾಮೂಹಿಕ ಜವಾಬ್ದಾರಿಯ ಅಗತ್ಯವಿದೆ ಎಂದು ಹೇಳಿದ ನ್ಯಾಯಾಲಯ, ದ್ರೌಪದಿಯ ರಕ್ಷಣೆಗೆ ಆಗ ಶ್ರೀಕೃಷ್ಣನಿದ್ದ. ಈಗ ರಕ್ಷಣೆಗೆ ಯಾರೂ ಇಲ್ಲ ಎಂದಿದೆ. ’’ದ್ರೌಪದಿ ನಿನ್ನ ಆಯುಧ ಎತ್ತಿಕೋ, ಈಗ ಗೋವಿಂದ ಬರುವುದಿಲ್ಲ…” ಎನ್ನುವ ಕವಿತೆಯನ್ನು ಪ್ರಸ್ತಾಪಿಸಿದೆ. ತುಳಿತಕ್ಕೊಳಗಾದವರಿಗೆ ಎದ್ದು ನ್ಯಾಯಕ್ಕಾಗಿ ಹೋರಾಡುವಂತೆ ಪ್ರೇರೇಪಿಸಲು ಈ ಕವಿತೆಯನ್ನು ರೂಪಕವಾಗಿ ಬಳಸಲಾಗುತ್ತದೆ. ಅದೇ ಕವಿತೆಯನ್ನು ಹೈಕೋರ್ಟ್ ಪ್ರಸ್ತಾಪಿಸಿದೆ.
ಬೆಳಗಾವಿ ಜಿಲ್ಲೆ ವಂಟಮೂರಿಯ ಅಶೋಕ್(24), ಪ್ರಿಯಾಂಕಾ(18) ಪರಸ್ಪರ ಪ್ರೀತಿಸುತ್ತಿದ್ದರು. ಇವರು ಗ್ರಾಮವನ್ನು ತೊರೆದು ಹೋಗಿದ್ದು, ಪ್ರಿಯಾಂಕಾ ಕುಟುಂಬದವರು ಮತ್ತು ಸಂಬಂಧಿಕರು ಅಶೋಕನ ಮನೆಗೆ ನುಗ್ಗಿ 42 ವರ್ಷದ ತಾಯಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಪ್ರಸ್ತಾಪಿಸಿದ ಹೈಕೋರ್ಟ್, ಭಾರತದ ಮಾಜಿ ಗವರ್ನರ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಕ್ ಅವಧಿಯಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದೆ. ಅಲ್ಲಿ ಇಡೀ ಗ್ರಾಮವು ಅಪರಾಧಕ್ಕಾಗಿ ಪುಂಡಗಂದಾಯ ಪಾವತಿಸಬೇಕಿತ್ತು. ತಪ್ಪು ನಡೆಯುತ್ತಿದ್ದರೂ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಸಾರ್ವಜನಿಕರಿಗೂ ಅದೇ ರೀತಿಯಲ್ಲಿ ತೆರಿಗೆ ವಿಧಿಸಲು ಮುಂದಾದರೆ ಗ್ರಾಮಗಳ ಜನರಿಗೆ ಸ್ವಲ್ಪ ಜವಾಬ್ದಾರಿ ಬರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಕೃತ್ಯದಲ್ಲಿ ಭಾಗಿಯಾಗುವುದು ಹೇಗೆ ಅಪರಾಧ ಕೃತ್ಯವಾಗುತ್ತದೆಯೋ ಅದನ್ನು ನೋಡಿಯೂ ಮೂಕಪ್ರೇಕ್ಷಕರಂತೆ ಇರುವುದು ಕೂಡ ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿದ್ದ ಜನ ಅದನ್ನು ತಡೆಯಲು ಪ್ರಯತ್ನಿಸಬಹುದಿತ್ತು ಎಂದು ಹೇಳಿದೆ.