
ಭುವನೇಶ್ವರ: ಒಡಿಶಾದಲ್ಲಿ ಶೀಘ್ರದಲ್ಲೇ ಸಿರಿಧಾನ್ಯಗಳಿಂದ ಮದ್ಯ ತಯಾರಿಸಲಾಗುವುದು ಮತ್ತು ರಾಜ್ಯ ಸರ್ಕಾರವು ಅದಕ್ಕಾಗಿ ಬ್ರೂವರ್‌ಗಳಿಗೆ ಸಬ್ಸಿಡಿ ನೀಡಲಿದೆ ಎಂದು ಅಬಕಾರಿ ಸಚಿವ ಪೃಥಿವಿರಾಜ್ ಹರಿಚಂದನ್ ಮಾಹಿತಿ ನೀಡಿದ್ದಾರೆ.
2025-26 ರ ಅಬಕಾರಿ ನೀತಿಯನ್ನು ಪರಿಶೀಲಿಸಿದ ಅವರು, ರಾಗಿ, ಜೋಳ ಮತ್ತು ಬಾಜ್ರಾದಿಂದ ಮದ್ಯ ತಯಾರಿಸಲು ಆಸಕ್ತಿ ಹೊಂದಿರುವ ಕಂಪನಿಗಳಿಗೆ ಅಬಕಾರಿ ಇಲಾಖೆ ಸಬ್ಸಿಡಿ ನೀಡಲಿದೆ.. ಈ ನಿಟ್ಟಿನಲ್ಲಿ ತಮ್ಮ ಇಲಾಖೆಯು ಕೈಗಾರಿಕಾ ಇಲಾಖೆಯೊಂದಿಗೆ ಸಮಾಲೋಚಿಸಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ರಾಗಿ ಸೇರಿ ಸಿರಿಧಾನ್ಯ ಕೃಷಿಯನ್ನು ಉತ್ತೇಜಿಸುವುದು ಮತ್ತು ಅಕ್ರಮ ಮದ್ಯ ವ್ಯವಹಾರವನ್ನು ಕಡಿಮೆ ಮಾಡುವುದು ರಾಗಿಯಿಂದ ಮದ್ಯ ಉತ್ಪಾದಿಸುವ ಅಬಕಾರಿ ಇಲಾಖೆಯ ನಿರ್ಧಾರವಾಗಿದೆ. ಸ್ಥಳೀಯ ಹೂವು ಮಹುವಾದಿಂದ ಉತ್ತಮ ಗುಣಮಟ್ಟದ ಸುವಾಸನೆಯ ಮದ್ಯವನ್ನು ಉತ್ಪಾದಿಸುವ ಮತ್ತು ಭವಿಷ್ಯದಲ್ಲಿ ಇತರ ರಾಜ್ಯಗಳು ಮತ್ತು ವಿದೇಶಗಳಿಗೆ ರಫ್ತು ಮಾಡುವ ಬಗ್ಗೆಯೂ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹರಿಚಂದನ್ ಮಾಹಿತಿ ನೀಡಿದ್ದಾರೆ.
ಅಬಕಾರಿ ಆಯುಕ್ತ ನರಸಿಂಗ ಭೋಲ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ, ಬ್ರಾಂಡೆಡ್ ವಿದೇಶಿ ಮದ್ಯದ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ನಿರ್ಧರಿಸಲಾಯಿತು.
ರಾಜ್ಯದಲ್ಲಿ ಅಕ್ರಮ ಮದ್ಯ ವ್ಯಾಪಾರವನ್ನು ತಡೆಯಲು ರಾಜ್ಯ ಸರ್ಕಾರವು 2025-26 ರ ಅಬಕಾರಿ ನೀತಿಯನ್ನು ಜಾರಿಗೆ ತರಲು ಸಜ್ಜಾಗಿದೆ.