ಬೆಂಗಳೂರು: ಲೋಕಸಭೆ ಚುನಾವಣೆ, ಬೇಸಿಗೆ, ಹಬ್ಬ, ಜಾತ್ರೆಗಳ ಕಾರಣದಿಂದ ಮದ್ಯ ಮತ್ತು ಬಿಯರ್ ಗೆ ಭಾರಿ ಬೇಡಿಕೆ ಶುರುವಾಗಿದೆ.
ಆದರೆ ಬೇಡಿಕೆಗೆ ತಕ್ಕಂತೆ ಮದ್ಯ, ಬಿಯರ್ ಪೂರೈಕೆ ಆಗುತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಾಸರಿ ಮಾರಾಟಕ್ಕಿಂತ ಶೇಕಡ 20ಕ್ಕಿಂತ ಅಧಿಕ ಮದ್ಯ ಎತ್ತುವಳಿ ಅಥವಾ ಮಾರಾಟ ಮಾಡುವ ಸನ್ನದುದಾರರ ಬಗ್ಗೆ ತನಿಖೆ ನಡೆಸಿ ಪರವಾನಿಗೆ ರದ್ದು ಮಾಡುವುದಾಗಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಇದರಿಂದಾಗಿ ಸಗಟು ಮದ್ಯ ಮಾರಾಟ ಮಳಿಗೆಗಳ ಮಾಲೀಕರು ಹೆಚ್ಚಿನ ಬೇಡಿಕೆಯ ಮದ್ಯ ಪೂರೈಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಮದ್ಯ ಮತ್ತು ಬಿಯರ್ ಮಾರಾಟ ಹೆಚ್ಚಾಗಿರುತ್ತದೆ. ಈಗ ಲೋಕಸಭೆ ಚುನಾವಣೆ, ಜಾತ್ರೆ, ಹಬ್ಬಗಳ ಕಾರಣ ಮದ್ಯ ಮತ್ತು ಬಿಯರ್ ಬೇಡಿಕೆ ಎರಡು ಪಟ್ಟು ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಮದ್ಯ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ ಮದ್ಯ ಮಾರಾಟ ಸನ್ನದುಗಳಲ್ಲಿ ಮದ್ಯದ ಎತ್ತುವಳಿ ಮತ್ತು ಮಾರಾಟದ ಪ್ರತಿದಿನದ ವಹಿವಾಟಿನ ಮೇಲೆ ನಿಗಾ ಇಡಲಾಗುತ್ತದೆ. ಈ ಅವಧಿಯಲ್ಲಿ ಮದ್ಯದ ಎತ್ತುವಳಿ ಮತ್ತು ಮಾರಾಟ ಸರಾಸರಿಗಿಂತ ಶೇಕಡ 20ರಷ್ಟು ಹೆಚ್ಚಳವಾದಲ್ಲಿ ತನಿಖೆ ನಡೆಸಿ ಪರವಾನಿಗೆ ರದ್ದು ಮಾಡುವುದಾಗಿ ಅಬಕಾರಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಈ ಕಾರಣದಿಂದಾಗಿ ಬೇಡಿಕೆ ಶೇಕಡ 20ರ ಮಿತಿ ಹೇರಿದ ಕಾರಣದಿಂದಾಗಿ ಮಾರಾಟಗಾರರು ಬೇಡಿಕೆಗೆ ತಕ್ಕಂತೆ ಮದ್ಯ ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.