ಕೊಪ್ಪಳ: ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಬಾರ್ ಆರಂಭಿಸಬೇಕೆಂದು ಮದ್ಯಪ್ರಿಯರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದ್ದು, ತಮ್ಮ ಗ್ರಾಮದಲ್ಲಿ ಬಾರ್ ಆರಂಭಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬೇರೆ ಊರುಗಳಿಗೆ ಹೋಗಿ ಮದ್ಯ ತರಬೇಕಿದೆ. ಇದರಿಂದ ಹೆಚ್ಚಿನ ಹಣ, ಸಮಯ ವ್ಯರ್ಥವಾಗುತ್ತದೆ. ಅಲ್ಲದೆ, ಗ್ರಾಮದಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಬಾರ್ ಆರಂಭಿಸುವುದರಿಂದ ಇದಕ್ಕೆ ಕಡಿವಾಣ ಬೀಳಲಿದೆ. ಪಟ್ಟಭದ್ರ ಹಿತಾಸಕ್ತಿಗಳು ಬಾರ್ ತೆರೆಯಲು ಬಿಡುತ್ತಿಲ್ಲ ಎಂದು ಆರೋಪಿಸಿದ ಮದ್ಯಪ್ರಿಯರು ಕೂಡಲೇ ಬಾರ್ ಪ್ರಾರಂಭಿಸಬೇಕೆಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.
ಈ ನಡುವೆ ಗ್ರಾಮದಲ್ಲಿ ಬಾರ್ ತೆರೆಯಬಾರದು ಎಂದು ಮತ್ತೆ ಕೆಲವರು ಒತ್ತಾಯಿಸಿದ್ದಾರೆ. ಈ ಹಿಂದೆಯೇ ಗ್ರಾಮದಲ್ಲಿ ಬಾರ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಶಾಸಕ ಶಾಸಕ ಬಸವರಾಜ ರಾಯರೆಡ್ಡಿ ಅವರು ಪತ್ರ ಬರೆದ ಕಾರಣ ಬಾರ್ ಆರಂಭವಾಗಿಲ್ಲ. ಹೀಗಾಗಿ ಮದ್ಯಪ್ರಿಯರು ಪ್ರತಿಭಟನೆ ನಡೆಸಿ ಬಾರ್ ತೆರೆಯಲು ಮನವಿ ಸಲ್ಲಿಸಿದ್ದಾರೆ.