
ಬೆಂಗಳೂರು: ಬಿಯರ್ ದರ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರು ಶಾಕ್ ನೀಡಿದ್ದಾರೆ. ಬೆಲೆ ಏರಿಕೆ ಕಾರಣಕ್ಕೆ ಮದ್ಯಪ್ರಿಯರು ಬಿಯರ್ ಖರೀದಿಗೆ ನಿರಾಸಕ್ತಿ ತೋರಿಸಿದ ಪರಿಣಾಮ ರಾಜ್ಯದಲ್ಲಿ ಬಿಯರ್ ಮಾರಾಟ ಶೇಕಡ 16ರಷ್ಟು ಕುಸಿತ ಕಂಡಿದೆ.
ಜನವರಿ 20 ರಿಂದ ಜಾರಿಗೆ ಬರುವಂತೆ ಸರ್ಕಾರ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಿ ದರ ಏರಿಕೆ ಮಾಡಿದ್ದು, ಇದರೊಂದಿಗೆ ಸಾಮಾನ್ಯ ಬ್ರಾಂಡ್ ಗಳಿಂದ ಪ್ರೀಮಿಯಂ ಬ್ರಾಂಡ್ ಗಳವರೆಗೆ ಎಲ್ಲಾ ಬಗೆಯ ಬಿಯರ್ ದರ ಹೆಚ್ಚಳವಾಗಿದೆ. ಪ್ರತಿ ಬಿಯರ್ ಬಾಟಲ್ ದರ ಕನಿಷ್ಠ 10 ರಿಂದ 50 ರೂಪಾಯಿವರೆಗೆ ಏರಿಕೆಯಾಗಿದೆ. ಅದರಲ್ಲಿಯೂ ಆಲ್ಕೋಹಾಲ್ ಪ್ರಮಾಣ ಹೆಚ್ಚಾಗಿರುವ ಬಿಯರ್ ಗಳ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಇದು ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ.
ರಾಜ್ಯದೆಲ್ಲೆಡೆ ಬಿಯರ್ ಮಾರಾಟ ಕೃಷಿಯು ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಅಬಕಾರಿ ಇಲಾಖೆಯ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಸರ್ಕಾರದ ಗುರಿ ಸಾಧನೆಗಾಗಿ ಬಜೆಟ್ ಗೂ ಮೊದಲೇ ಬಿಯರ್ ದರ ಹೆಚ್ಚಳ ಮಾಡಿತ್ತು. ಆದರೆ ಖರೀದಿಗೆ ಆಸಕ್ತಿ ತೋರಿಸುತ್ತಿಲ್ಲ. ಕಳೆದ ವರ್ಷ ಜನವರಿ 20 ರಿಂದ ಫೆಬ್ರವರಿ 20ರವರೆಗೆ 287 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 243 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕಳೆದ ಒಂದು ತಿಂಗಳಲ್ಲಿ ಸುಮಾರು 45 ಲಕ್ಷ ಲೀಟರ್ ಬಿಯರ್ ಮಾರಾಟ ಕಡಿಮೆಯಾಗಿದೆ. ಮದ್ಯಪ್ರಿಯರಿಗೆ ಬಿಯರ್ ದರ ಏರಿಕೆ ಬಿಸಿ ತಟ್ಟಿದೆ. ಹೀಗಾಗಿ ಕಡಿಮೆ ಬೆಲೆಯ ಬ್ರಾಂಡ್ ಗಳತ್ತ ಮದ್ಯಪ್ರಿಯರು ಮುಖ ಮಾಡುತ್ತಿದ್ದಾರೆ.