ಬೆಂಗಳೂರು: ಮದ್ಯದ ದರ ಶೀಘ್ರವೇ ಮತ್ತೊಮ್ಮೆ ಏರಿಕೆಯಾಗಲಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ರಾಜ್ಯ ಸರ್ಕಾರ ಮದ್ಯದ ದರ ಪರಿಷ್ಕರಣಿಗೆ ಮುಂದಾಗಿದೆ. ಅಬಕಾರಿ ಇಲಾಖೆಯ ಪ್ರಸ್ತಾವನೆಗೆ ಸರ್ಕಾರ ಶೀಘ್ರದಲ್ಲೇ ಒಪ್ಪಿಗೆ ನೀಡುವ ಸಾಧ್ಯತೆಯಿದ್ದು, ಅತ್ಯಂತ ಕಡಿಮೆ ದರದ ಮದ್ಯದ ಬೆಲೆ ಕೂಡ ದುಬಾರಿಯಾಗಲಿದೆ ಎಂದು ಹೇಳಲಾಗಿದೆ.
ಫೆಬ್ರವರಿ 16ರಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ನೆರೆ ರಾಜ್ಯಗಳ ಮದ್ಯದ ಬೆಲೆಗೆ ಅನುಗುಣವಾಗಿ ಐಎಂಎಲ್ ಹಾಗೂ ಬಿಯರ್ ಬೆಲೆ ಪರಿಷ್ಕರಿಸುವುದಾಗಿ ಘೋಷಿಸಿದ್ದರು. ಅಬಕಾರಿ ಇಲಾಖೆ ಅಧ್ಯಯನ ನಡೆಸಿ ಬೆಲೆ ಹೆಚ್ಚಳದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಪ್ರಸ್ತಾಪವನ್ನು ತಡೆಹಿಡಿದಿದ್ದು, ಇದೀಗ ಚುನಾವಣೆ ಮುಗಿದಿರುವುದರಿಂದ ಶ್ರೀಘ್ರದಲ್ಲಿಯೇ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗುವುದು. ಇದರಿಂದಾಗಿ ವಾರ್ಷಿಕ ಬೊಕ್ಕಸಕ್ಕೆ 500 ಕೋಟಿ ರೂ. ಹೆಚ್ಚುವರಿ ಆದಾಯದ ನಿರೀಕ್ಷೆ ಇದೆ.
ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ತೆಲಂಗಾಣಕ್ಕೆ ಹೋಲಿಸಿದ್ದಲ್ಲಿ ರಾಜ್ಯದಲ್ಲಿ ಮದ್ಯದ ಹಲವು ಸ್ಲ್ಯಾಬ್ ಗಳು, ಕಾರ್ಮಿಕರು ಹೆಚ್ಚಾಗಿ ಸೇವಿಸುವ ಮದ್ಯಗಳ ಬೆಲೆ ಕಡಿಮೆ ಇದ್ದು, ಇಂತಹ ಮದ್ಯಗಳ ದರ ಹೆಚ್ಚಳವಾಗಲಿದೆ. ಬೇರೆ ರಾಜ್ಯಗಳಲ್ಲಿ ದುಬಾರಿ ಬೆಲೆಯ ಮದ್ಯಗಳ ದರ ಹೆಚ್ಚಾಗಿದ್ದು, ಇವುಗಳ ಬೆಲೆ ರಾಜ್ಯದಲ್ಲಿ ಸ್ವಲ್ಪ ಕಡಿಮೆಯಾಗುವ ಸಂಭವವಿದೆ ಎನ್ನಲಾಗಿದೆ.