ಬೆಂಗಳೂರು: ಮದ್ಯದ ದರ ಏರಿಕೆಗೆ ಸರ್ಕಾರ ಬ್ರೇಕ್ ಆಗಿದೆ. ಒಂದು ತಿಂಗಳ ಮಟ್ಟಿಗೆ ಹಳೆ ದರ ಮುಂದುವರೆಸಲು ನಿರ್ಧರಿಸಿದೆ. ಪಕ್ಕದ ರಾಜ್ಯಗಳ ದರಕ್ಕೆ ತಕ್ಕಂತೆ ಮದ್ಯದ ದರ ಪರಿಷ್ಕರಿಸಿ ದರ ಏರಿಕೆ ಮಾಡುವ ಸಾಧ್ಯತೆ ಇದೆ.
ಜುಲೈ 1ರಿಂದಲೇ ಮದ್ಯದ ದರ ಪರಿಷ್ಕರಣೆಗೆ ಸರ್ಕಾರ ಮುಂದಾಗಿತ್ತು. ಇದೀಗ ಒಂದು ತಿಂಗಳು ದರ ಪರಿಷ್ಕರಣೆಯನ್ನು ಮುಂದೂಡಲಾಗಿದೆ. ಕಡಿಮೆ ದರದ ಮದ್ಯಗಳ ಬೆಲೆ ಹೆಚ್ಚಳ ಒಂದು ತಿಂಗಳು ತಡವಾಗುತ್ತದೆ. ಜುಲೈ 1ರಿಂದ ಮದ್ಯದ ದರ ಪರಿಷ್ಕರಣೆ ನಡೆಸುವುದಾಗಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಬಕಾರಿ ಇಲಾಖೆ ಒಂದು ತಿಂಗಳ ಮಟ್ಟಿಗೆ ದರ ಪರಿಷ್ಕರಿಸದೆ ಯಥಾಸ್ಥಿತಿ ಮುಂದುವರಿಸಲಿದೆ.
ಆ. 1 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಅಬಕಾರಿ ಇಲಾಖೆಯಲ್ಲಿ ರಾಜ್ಯಸ್ವ ಸಂಗ್ರಹ ಹೆಚ್ಚಳ ಉದ್ದೇಶದಿಂದ ನೆರೆಹೊರೆಯ ರಾಜ್ಯಗಳ ಮದ್ಯದ ದರಕ್ಕೆ ಹೋಲಿಸಿ ನಮ್ಮಲ್ಲಿಯೂ ದರ ಪರಿಷ್ಕರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದರು. ನೆರೆ ರಾಜ್ಯಗಳಲ್ಲಿ ಬಡವರು ಸೇವಿಸುವ ಮದ್ಯದ ದರ ಹೆಚ್ಚಾಗಿದೆ. ದುಬಾರಿ ಮದ್ಯದ ದರ ಕರ್ನಾಟಕಕ್ಕಿಂತಲೂ ಸ್ವಲ್ಪ ಕಡಿಮೆ ಇದೆ. ಆ ಸರಾಸರಿಗೆ ಅನುಗುಣವಾಗಿ ರಾಜ್ಯದಲ್ಲಿ ಮದ್ಯದ ದರ ಪರಿಷ್ಕರಿಸಲಾಗುವುದು ಎನ್ನಲಾಗಿದೆ.