ಬೆಂಗಳೂರು: ಬ್ರಿಟನ್ ನ ಹೈಸ್ಪೀಡ್ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ 9 ದಿನ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
ಇಂದಿನಿಂದ ಪ್ರತಿದಿನ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ರವರೆಗೆ ನಿರ್ಬಂಧ ಹೇರಲಾಗಿದೆ. ಜನವರಿ 1 ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ದಿನಪತ್ರಿಕೆ ಸೇರಿ ಅಗತ್ಯ ಸೇವೆಗಳು ಲಭ್ಯವಿರುತ್ತವೆ.
ದೂರದ ಊರಿಗೆ ತೆರಳುವ ಬಸ್ ಗಳು, ರೈಲು, ಸರಕು ಸಾಗಣೆಗೆ ಅವಕಾಶ ನೀಡಲಾಗಿದೆ. ಕ್ರಿಸ್ಮಸ್ ಪ್ರಯುಕ್ತ ಇವತ್ತು ರಾತ್ರಿ ಸಾಮೂಹಿಕ ಪ್ರಾರ್ಥನೆಗೆ ನಿಯಮಾನುಸಾರ ಒಪ್ಪಿಗೆ ನೀಡಲಾಗಿದೆ. ರಾತ್ರಿಪಾಳಿ ಕೈಗಾರಿಕೆಗಳು ಶೇಕಡ 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಕೋವಿಡ್ ಸಲಹಾ ಸಮಿತಿಯ ಶಿಫಾರಸ್ಸಿನಂತೆ ನೈಟ್ ಕರ್ಫ್ಯೂ ಜಾರಿಗೆ ತೀರ್ಮಾನ ಕೈಗೊಳ್ಳಲಾಗಿದೆ.
ಕೃಷಿ ಉತ್ಪನ್ನ, ಸರಕು ಸಾಗಣೆ ವಾಹನ, ವಿಮಾನ ಸಂಚಾರ ಇರುತ್ತದೆ. ರೈಲು, ಬಸ್, ವಿಮಾನ ಪ್ರಯಾಣಿಕರು ಟಿಕೆಟ್ ತೋರಿಸಿ ಆಟೋ, ಕ್ಯಾಬ್ ಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನೈಟ್ ಕರ್ಫ್ಯೂ ಸಂದರ್ಭದಲ್ಲಿ ಮದ್ಯ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.