ಬೆಳಗಾವಿ: ಒಂದೆಡೆ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೆ ಇನ್ನೊಂದೆಡೆ ಸುವರ್ಣಸೌಧದ ಬಳಿ ವಿವಿಧ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಮದ್ಯಪ್ರಿಯರು ಕೂಡ ಪ್ರತಿಭಟನೆ ನಡೆಸಿದ್ದು ಹಲವು ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟದ ಸಂಘದಿಂದ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮದ್ಯಪ್ರಿಯರ ಬೇಡಿಕೆ ಕೇಳಿ ಶಾಕ್ ಆಗಿದ್ದಾರೆ.
ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು, ‘ಕುಡುಕ’ ಎಂಬ ಪದ ನಿಷೇಧಿಸಿ ‘ಮದ್ಯಪ್ರಿಯ’ ಎಂದು ಸೇರಿಸಬೇಕು. ಲಿವರ್ ಸಮಸ್ಯೆಯಿಂದ ಬಳಲುವವರಿಗೆ ಚಿಕಿತ್ಸೆ ಕೊಡಿಸಬೇಕು. ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ, ಬಾರ್ ಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ, ಸ್ವಚ್ಛತೆ, ಮದ್ಯಪ್ರಿಯರ ಭವನ ಸ್ಥಾಪನೆ, ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನ ಎಂದು ಘೋಷಿಸಬೇಕು. ಮದ್ಯಸೇವನೆಯಿಂದ ಮೃತಪಟ್ಟವರಿಗೆ 10 ಲಕ್ಷ ಪರಿಹಾರ ಘೋಷಣೆ, ಮದ್ಯಪ್ರಿಯರ ಕುಟುಂಬದವರನ್ನು ವಿವಾಹವಾದರೆ 2 ಲಕ್ಷ ಪ್ರೋತ್ಸಾಹ ಧನ ನೀಡಬೇಕು ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟಿದ್ದಾರೆ.
ಮದ್ಯಪ್ರಿಯರ ಬೇಡಿಕೆ ಆಲಿಸಿದ ಸಚಿವರು ಅಚ್ಚರಿಗೊಂಡು ಪರಿಶೀಲಿಸುವುದಾಗಿ ಹೇಳಿ ತೆರಳಿದ್ದಾರೆ.