ಚಿತ್ರದುರ್ಗ: ಬಾರ್ ಲೈಸೆನ್ಸ್ ಸಿಗೋದೇ ಬಲು ಕಷ್ಟ. ಅಂತಹುದರಲ್ಲಿ ವ್ಯಕ್ತಿಯೊಬ್ಬ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ಕೊಡುವಂತೆ ಮನವಿ ಸಲ್ಲಿಸಿದ್ದಾರೆ.
ಕೋಟ್ಯಂತರ ರೂಪಾಯಿ ಸುರಿದರೂ ಮದ್ಯ ಮಾರಾಟದ ಲೈಸೆನ್ಸ್ ಸಿಗುವುದೇ ಕಷ್ಟ. ಹೀಗಿರುವಾಗ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸನಾಯಕರಹಟ್ಟಿ ಗ್ರಾಮದ ಚಂದ್ರಶೇಖರ್ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಮದ್ಯ ಮಾರಾಟಕ್ಕೆ ಕಡ್ಡಾಯವಾಗಿ ಲೈಸೆನ್ಸ್ ಹೊಂದಿರಬೇಕು. ಲೈಸೆನ್ಸ್ ಪಡೆಯಲು ನಿಯಮಗಳನ್ನು ಪಾಲಿಸಬೇಕು. ಹಣ ಕೂಡ ಸುರಿಯಬೇಕು. ಹೀಗಿರುವಾಗ ಚಂದ್ರಶೇಖರ್ ಮನವಿ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಅಬಕಾರಿ ಇಲಾಖೆಗೆ ಚಂದ್ರಶೇಖರ್ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಮುಂದುವರೆದಿದೆ. ತಾವು ಕೂಡ ಮದ್ಯ ಮಾರಾಟಕ್ಕೆ ಆಸಕ್ತಿ ಹೊಂದಿದ್ದು, ದಿನಸಿ ಅಂಗಡಿಯಲ್ಲಿ ಅಥವಾ ಮನೆಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅಬಕಾರಿ ಇಲಾಖೆಗೆ ಚಂದ್ರಶೇಖರ್ ಮನವಿ ಸಲ್ಲಿಸಿದ್ದಾರೆ.