ಈ ದೇವಾಲಯದ ಭೈರವನಾಥನಿಗೆ ಮದ್ಯವೇ ನೈವೇದ್ಯ…! 21-11-2022 9:12AM IST / No Comments / Posted In: India, Featured News, Live News, Special ಹೂವು, ಹಣ್ಣು, ವಿವಿಧ ಬಗೆಯ ಭಕ್ಷ್ಯ, ಭೋಜನಗಳನ್ನ ನೈವೇದ್ಯ ರೂಪದಲ್ಲಿ ಅರ್ಪಿಸುವುದು ಸಾಮಾನ್ಯ. ಆದರೆ ಇಲ್ಲಿ ಮದ್ಯ, ಸಿಗರೇಟು, ಗಾಂಜಾ, ಸೇಂದಿಯನ್ನ ದೇವರಿಗೆ ನೇವೇದ್ಯ ರೂಪದಲ್ಲಿ ಭಕ್ತರು ಅರ್ಪಿಸುತ್ತಾರೆ. ಮಡಿ, ಮೈಲಿಗೆ ಇರುವ ದೇವಸ್ಥಾನದಲ್ಲಿ ಇದೆಂಥಾ ಪದ್ಧತಿ ಅಂತಿರಾ ? ಅಷ್ಟಕ್ಕೂ ಈ ರೀತಿ ವಿಭಿನ್ನವಾದ ಸಂಪ್ರದಾಯ ಇರುವುದು ಮಧ್ಯಪ್ರದೇಶದ ಭೈರವನಾಥ ದೇವಸ್ಥಾನದಲ್ಲಿ. ಮಧ್ಯಪ್ರದೇಶದ ಭಗತಿಪುರದಲ್ಲಿರುವ ಭೈರವ ದೇವಾಲಯಕ್ಕೆ ಭೈರವನಾಥನ ದರ್ಶನ ಪಡೆಯಲು ದೂರದೂರಿನಿಂದ ಭಕ್ತರು ಬರುತ್ತಾರೆ. ಭೈರವ ಬಾಬಾನನ್ನ ಮೆಚ್ಚಿಸಲು ಈ ರೀತಿಯ ಭಿನ್ನ ಭಿನ್ನ ರೂಪದ ಪ್ರಸಾದವನ್ನ ನೈವೇದ್ಯ ಇಡಲು ತರುತ್ತಾರೆ. ಭಕ್ತರ ಪ್ರಕಾರ ಇದು ಭೈರವ ಬಾಬಾಗೆ ಇಷ್ಟವಾಗುತ್ತೆ, ಪ್ರಸನ್ನವಾಗ್ತಾನೆ ಅನ್ನೋ ನಂಬಿಕೆ. ಇತ್ತೀಚೆಗೆ ಕಾರ್ತಿಕ ಅಷ್ಟಮಿಯ ಸಂದರ್ಭದಂದು ಭೈರವ ದೇವಾಲಯವನ್ನ ಸುಂದರವಾಗಿ ಅಲಂಕರಿಸಲಾಗಿತ್ತು. ಈ ಸಂದರ್ಭದಲ್ಲಿ 60 ಬಗೆಯ ಮದ್ಯ, 40 ಸಿಗರೇಟು, ಗಾಂಜಾ, ಸೇಂದಿ, ಇದಷ್ಟೆ ಅಲ್ಲ ಇದೆಲ್ಲದರ ಜೊತೆಗೆ 1,351 ವಸ್ತುಗಳನ್ನ ನೈವೇದ್ಯವನ್ನಾಗಿ ಇಡಲಾಗಿತ್ತು. ಅಂದರೆ 390 ವಿಧದ ಅಗರಬತ್ತಿಗಳು, 180 ಬಗೆಯ ಕ್ರೀಮ್, 75 ಬಗೆಯ ಡ್ರೈ ಫ್ರೂಟ್ಸ್, 64 ಚಾಕೊಲೇಟ್, 60 ಬಗೆಯ ಗುಜರಾತಿ ಕುರುಕಲು, 56 ಬಗೆಯ ಉಪ್ಪು ಖಾರದ ತಿಂಡಿ, 55 ಬಗೆಯ ಸಿಹಿತಿಂಡಿ, 40 ಬಗೆಯ ಬಿಸ್ಕತ್ತುಗಳು, 40 ಬಗೆಯ ಬೇಕರಿ ವಸ್ತುಗಳು ಮತ್ತು 28 ಹಣ್ಣುಗಳು ಹಾಗೂ ಇದೆಲ್ಲದರ ಜೊತೆಗೆನೇ 28 ಬಗೆಯ ತಂಪು ಪಾನೀಯಗಳನ್ನ ಇಡಲಾಗಿತ್ತು. ಇವೆಲ್ಲವನ್ನೂ ಭೈರವನಾಥನ ಪೂಜೆಯ ನಂತರ ಇವುಗಳನ್ನ ಭಕ್ತರಿಗೆ ಹಂಚಲಾಯಿತು. ಈ ಒಂದು ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಒಂದು ಮಾಹಿತಿ ಪ್ರಕಾರ, ಶಿಪ್ರಾ ನದಿಯ ದಡದಲ್ಲಿರುವ ಕಾಲ ಭೈರವ ದೇವಾಲಯವನ್ನು ರಾಜ ಭದ್ರಸೇನ್ ನಿರ್ಮಿಸಿದನೆಂದು ಹೇಳಲಾಗುತ್ತದೆ. ಅಷ್ಟ ಭೈರವರಲ್ಲಿ ಈ ಭೈರವನಾಥನೇ ಪ್ರಮುಖ ಅಂತ ಹೇಳಲಾಗುತ್ತೆ. ಅಷ್ಟಮಿಯ ದಿನದಂದು ಬಾಬಾ ಭೈರವನಾಥನನ್ನು ಪೂಜಿಸುವ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಅನ್ನೊ ನಂಬಿಕೆ ಇದೆ. ಇದೇ ಕಾರಣಕ್ಕೆ ಭೈರವ ಬಾಬಾ ಪ್ರಸನ್ನವಾಗಲಿ ಎಂದೇ ಭಕ್ತರು ಈ ಹೀಗೆ ನೈವೇದ್ಯಗಳನ್ನ ಅರ್ಪಿಸುತ್ತಾರೆ. ಇತ್ತೀಚೆಗೆ ಅನೇಕರು ಈ ಪದ್ಧತಿಯನ್ನ ಆಕ್ಷೇಪಿಸುತ್ತಿದ್ದಾರೆ. ದೇವರ ಹೆಸರಲ್ಲಿ ದುಷ್ಟರು ಇದನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಅನೇಕರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಭಕ್ತರು ಈ ಒಂದು ಸಂಪ್ರದಾಯವನ್ನ ತಲೆತಲಾಂತರದಿಂದ ಪಾಲಿಸಿಕೊಂಡು ಬರ್ತಿದ್ದಾರೆ ಅನ್ನೋದಂತೂ ನಿಜ.