ಬೆಂಗಳೂರು: ವಿಧಾನಸಭೆ ಚುನಾವಣೆ ಮತ್ತು ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 4 ದಿನ ಮದ್ಯ ಮಾರಾಟ ಬಂದ್ ಆಗಲಿದೆ. ಎಲ್ಲೆಡೆ ಮದ್ಯಕ್ಕೆ ಭಾರಿ ಬೇಡಿಕೆ ಕಂಡು ಬಂದಿದೆ. ಮದ್ಯ ಮಾರಾಟ ಮಳಿಗೆಗಳಲ್ಲಿ ಭಾನುವಾರ ಖರೀದಿ ಭರಾಟೆ ಜೋರಾಗಿತ್ತು. ಹಲವೆಡೆ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.
ಸೋಮವಾರ ಸಂಜೆ 5 ಗಂಟೆಯಿಂದ ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ನಿಷೇಧ ಹೇರಲಾಗಿದೆ. ಮೇ 9, 10, 13 ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಆಗಲಿದೆ. ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ದಿನಾಂಕದ 48 ಗಂಟೆಗಳ ಮೊದಲ ಅವಧಿಯಲ್ಲಿ ಅಂದರೆ ಮೇ 8ರಂದು ಸಂಜೆ 5 ಗಂಟೆಯಿಂದ ಮೇ 10ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ, ಪೂರೈಕೆ ನಿಷೇಧಿಸಲಾಗಿದೆ.
ಮತ ಎಣಿಕೆ ದಿನವೂ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿದ್ದು, ಮೇ 13 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಮಧ್ಯದ ಅಂಗಡಿ ಬಂದ್ ಆಗಲಿವೆ. 4 ದಿನ ಮದ್ಯ ದಾಸ್ತಾನು ಮಾಡಲು ಕಡಿವಾಣ ಹಾಕುವಂತೆ ಸೂಚನೆ ನೀಡಲಾಗಿದೆ.